Saturday, October 15, 2011

ಹಾಗೆ ಸುಮ್ಮನೆ...

ನಮ್ಮ ಮನಸಿನ ನಡವಳಿಕೆ ತೀರಾ ವಿಚಿತ್ರ ಅಲ್ವ? ಮಂಗನಿಂದ ಮಾನವ ಅಂತಾರೆ ಮನುಷ್ಯ ಬದಲಾಗಿದ್ರು ಸಹ ಮನಸ್ಸಿನಿಂದ ಇನ್ನು ಮಂಗನ ಬುದ್ದಿ ಹೋಗಿಲ್ಲ ಅನ್ಸುತ್ತೆ. ಬೇರೆಯವರ ಮನಸಿನ ಬಗ್ಗೆ ನನಗಷ್ಟು ಗೊತ್ತಿಲ್ಲ. ಆದ್ರೆ ನನ್ ಮನಸ್ಸಂತೂ ಇನ್ನು ಮಂಗನ ಬುದ್ದಿ ಕಳಕೊಂಡಿಲ್ಲ. ಯಾಕೇಳ್ತೀನಿ ಅಂದ್ರೆ, ಮುಂಚೆ ಎಲ್ಲ ಏನಾದ್ರೂ ಬರೆಯೋ ಉತ್ಸಾಹ ತುಂಬಾ ಇರ್ತಿತ್ತು, ಆದ್ರೆ ಬರೆಯೋಕೆ ಪುರುಷೋತ್ತು ಸಿಕ್ತಿರಲಿಲ್ಲ. ಈಗ ಕಳೆದೊಂದು ತಿಂಗಳಿಂದ ನನಗೆ ಬಿಡುವೋ ಬಿಡುವು, ಆದ್ರೆ ಏನಾದ್ರೂ ಬರೆಯೋ ಮನಸಿಲ್ಲ. ಇದಕ್ಕೆ ಇರಬೇಕು ಜನ ಹೇಳೋದು "ಹಲ್ಲಿದ್ದಾಗ ಕಡಲೆ ಸಿಗೋಲ್ಲ, ಕಡಲೆ ಸಿಕ್ಕಾಗ ಹಲ್ಲೆ ಇರೋಲ್ಲ (ಮಾರ್ಪಾಡಾಗಿದೆ ಕ್ಷಮಿಸಿ)" ಅಂತ.

ಇರಲಿ, ಆದರೂ ಏನಾದ್ರೂ ಬರೆಯಬೇಕು ಅನ್ಕೊಂಡೆ ಯಾಕಂದ್ರೆ ನನಗೆ ಬಿಡುವು ಇನ್ನೊಂದೇ ದಿನ ಅಷ್ಟೇ. ಏನು ಬರೆಯೋಣ ಅಂತ ಯೋಚಿಸುತ್ತಿರಬೇಕಾದರೆ ಹೊಸದೇನು ಹೊಳೆಯಲಿಲ್ಲ, ಹಾಗಾಗಿ ಎಂದೋ ಓದಿದ್ದ ಒಂದು ಹಳೆಯ ಝೆನ್ ಕಥೆನೇ  ಬರೆದು ಬಿಡೋಣ ಅನ್ನಿಸಿ ಅದನ್ನೇ ಬರೀತಿದೀನಿ. ಚಿಕ್ಕದಾಗಿದ್ರು ಚೆನ್ನಾಗಿದೆ. ನನಗೆ ಹಿಡಿಸ್ತು, ನಿಮಗೂ ಹಿಡಿಸಬೇಕು ಅಂತೇನಿಲ್ಲ! ಯಾಕಂದ್ರೆ ನಾನು ಬರಿತಿರೋದು ಹಾಗೆ ಸುಮ್ಮನೆ!

ಒಂದಾನೊಂದು ಕಾಲದಲ್ಲಿ (ನಿರ್ದಿಷ್ಟವಾಗಿ ಅದು ಯಾವ ಕಾಲ ಅಂತ ದೇವರಾಣೆಗೂ ನಂಗೊತ್ತಿಲ್ಲ) ಯಥಾ ಪ್ರಕಾರ ಒಬ್ಬ ಝೆನ್ ಗುರುಗಳಿದ್ರು. ಗುರುಗಳು ಅಂದಮೇಲೆ ನಿಮಗೆ ಗೊತ್ತಲ್ಲ? ಗುರುಕುಲ, ಶಿಷ್ಯವೃಂದ ಎಲ್ಲವೂ ಇರುತ್ತೆ. ತಥಾ ಪ್ರಕಾರ ಅಲ್ಲೂ ಇತ್ತು. ಆ ಗುರುಗಳು ತಮ್ಮೆಲ್ಲ ಶಿಷ್ಯರಿಗೆ ಬೋಧನೆ ಮಾಡುತ್ತಾ ಎಲ್ಲರನ್ನು ಸನ್ಮಾರ್ಗದಲ್ಲಿ ನಡೆಸುವ ಕಾರ್ಯದಲ್ಲಿದ್ರು. ಅವರ ಶಿಷ್ಯಕೋಟಿಯಲ್ಲಿ ಒಬ್ಬ ಶಿಷ್ಯ ಇದ್ದ. ಮೊಂಡ ಅಂತಾನೆ ಭಾವಿಸಿಕೊಳ್ಳಿ (ಕೆಲವರಲ್ಲಿ ಗುಣಗಳೇ ಹಾಗೆ ಎಷ್ಟೇ ಬುದ್ದಿ ಹೇಳಿದ್ರು ಹೋಗಲ್ಲ. ಉದಾ: ನಾನು ಸಿಗರೆಟ್ ಸೇದುವ ಹಾಗೆ). ನೇರವಾಗಿ ಗುರುಗಳ ಬಳಿ ಬಂದವನೇ ಗುರುಗಳೇ, ನನ್ನ ಒಂದು ಸಂದೇಹವನ್ನ ಬಗೆ ಹರಿಸಿ ಅಂದನಂತೆ. ಗುರುಗಳು ಅದೇನು ಕೇಳು ಅಂದರಂತೆ. ಅದಕ್ಕವನು, "ಈ ಜಗತ್ತಿನಲ್ಲಿ ಎಲ್ಲವೂ ಮೊದಲೇ ನಿರ್ಧಾರ ಆಗಿರೋದಾದ್ರೆ ನಾವ್ಯಾಕೆ ಏನನ್ನಾದರು ಮಾಡಬೇಕು? ಆಗೋದು ಹೇಗಿದ್ರು ಆಗ್ತದಲ್ವ? ಅದಕ್ಕೆ ನಾನು ಇನ್ಮೇಲೆ ಏನನ್ನು ಮಾಡುವುದಿಲ್ಲ" ಅಂದನಂತೆ. ಅದಕ್ಕೆ ಗುರುಗಳು ಶಾಂತಚಿತ್ತದಿಂದ ನಗುತ್ತ ಹೇಳಿದರಂತೆ "ದಡ್ಡ, ನಿನ್ನ ಪ್ರಶ್ನೆಯಲ್ಲೇ ಉತ್ತರವಿದೆಯಲ್ಲೋ?". ಅದಕ್ಕೆ ಶಿಷ್ಯ "ಅದ್ಹೇಗೆ ಗುರುಗಳೇ?" ಅಂತ ಮರುಪ್ರಶ್ನೆ ಹಾಕಿದನಂತೆ. ಆಗ ಗುರುಗಳು, "ಮಗೂ, ಈ ಜಗತ್ತಿನಲ್ಲಿ ಎಲ್ಲವೂ ಮೊದಲೇ ನಿಶ್ಚಯ ಆಗಿದೆ ಅಂದಮೇಲೆ, ನಾವು ಏನು ಮಾಡಬೇಕು ಅನ್ನೋದು ಸಹ ಮೊದಲೇ ನಿರ್ಧಾರ ಆಗಿರುತ್ತೆ ಅಲ್ವಾ? ಆಗುವುದು ಹೇಗಿದ್ದರೂ ಆಗುತ್ತದೆ ನಿಜ. ನೀನು ಏನೂ ಮಾಡದೆ ಇದ್ರೂ ಸಹ, ನೀನು ಏನು ಮಾಡಬೇಕು ಅನ್ನೋದು ಮೊದಲೇ ನಿರ್ಧಾರ ಆಗಿದೆ ಅದನ್ನ ನೀನು ಮಾಡಿಯೇ ತೀರುತ್ತಿಯ. ಸುಮ್ಮನೆ ಸಂದೇಹಗಳ ಸುಳಿಯಲ್ಲಿ ಸಿಲುಕಿ ತಲೆಕೆಡಿಸಿಕೊಳ್ಳುವುದರಿಂದ  ಏನೂ ಪ್ರಯೋಜನವಿಲ್ಲ. ಹೋಗು ನಿನ್ನಿಂದ ಅದೇನು ಆಗಬೇಕು ಅದನ್ನ ಮಾಡು ಅಂದರಂತೆ.

ನಿಜವಾಗಲು ಎಷ್ಟು ವಿಸ್ಮಯ ಅಲ್ವಾ? ಇಂತಹ ಸೂಕ್ಷ್ಮ ವಿಚಾರಗಳಿಗೆ ಇಷ್ಟು ಸುಲಭದ ಪರಿಹಾರ ಬಹುಶ ಕೇವಲ ಝೆನ್ ಗುರುಗಳಿಗೆ ಮಾತ್ರ ಸಿಗ್ತಿರಬೇಕು ಅನ್ಸೊಲ್ವಾ?


No comments:

Post a Comment