ಹಾಗೆ ಸುಮ್ಮನೆ....

ಸುಮಾರು ಒಂದೂವರೆ ವರ್ಷದಿಂದ ಪ್ರಯತ್ನ ಮಾಡ್ತಿದ್ದೆ. ಇದೇನಾ ಜೀವನ? ಯಾರಿಗ್ಬೇಕು ಈ ಜಂಜಾಟ? ದಿನ ಅದೇ ಕೆಲಸ, ಅದೇ ಮುಖಗಳು ಮತ್ತೆ ಅದೇ ನಾಟಕಗಳು. ಈ ಜೀವನ ಶೈಲಿ ಸಾಕು. ಯಾವುದೋ ಒಂದು ಕಡೆ ಹೋಗಿ ಯಾಂತ್ರಿಕ ಬದುಕಿಗೆ ತಿಲಾಂಜಲಿ ಇಟ್ಟು ಆರಾಮಾಗಿ ಇದ್ದು ಬಿಡೋಣ ಅನ್ಕೊತಿದ್ದೆ... ಆಗ ನೆನಪಾಗಿದ್ದೆ ಗೌತಮ ಬುದ್ಧ. ಆಗಿಂದ ಪ್ರತಿ ರಾತ್ರಿ ಮಲಗೋವಾಗ, ಏನಾದ್ರು ಆಗ್ಲಿ ನಾನು ಬುದ್ಧನ ತರ ಅರ್ಧ ರಾತ್ರಿಲಿ ಎದ್ದು ಓಡಿ ಹೋಗೋಣ ಅನ್ನಿಸ್ತಿತ್ತು.... ಆದ್ರೆ ಏನ್ ಮಾಡೋದು ಬಡ್ಡಿಮಗಂದು ಮಲ್ಕೊಂಡ ಮೇಲೆ ಅರ್ಧ ರಾತ್ರಿಲಿ ಎಚ್ಚರನೇ ಆಗಿರಲಿಲ್ಲ....

ಅದೇನೋ ಹೇಳಿದಹಾಗೆ, ಅಂತು ಇಂತೂ ಮೊನ್ನೆ ಒಂದು ದಿನ ಅರ್ಧ ರಾತ್ರಿಲಿ ಎಚ್ಚರ ಆಯಿತು. ಎದ್ದು ಹಾಸಿಗೆ ಮೇಲೆ ಕೂತ್ಕೊಂಡೆ. ಇನ್ನೇನು ಎದ್ದಿದ್ದು ಆಗಿದೆ ಇನ್ನು ಬುದ್ಧನ ಹಾಗೆ ಎಲ್ಲವನ್ನು ಬಿಟ್ಟು ಓಡಿ ಹೋಗೋದೇ ಅನ್ಕೊಂಡು ಸುತ್ತ ಒಂದುಸಲ ಕಣ್ಣಾಡಿಸಿದೆ... ಮನೆಯೆಲ್ಲ ಖಾಲಿ ಖಾಲಿ, ಇರೋದೇ ನಾನೊಬ್ಬ!. ಮಧ್ಯರಾತ್ರಿ ಚಳಿಯಾಗ್ತಿತ್ತು. ಛೆ! ಯಾರು ಇಲ್ಲವಲ್ಲ? ಇನ್ಯಾರನ್ನ ಬಿಟ್ಟೋಗೋದು?  ಅನ್ಕೊಂಡು ಬೆಂಕಿ ಕಡ್ಡಿ ಗೀರಿ ಸಿಗರೇಟ್ ಹಚ್ಚಿ ಒಂದೆರಡು ಧಂ ಎಳೆದು ಮೈ ತುಂಬಾ ಬೆಡ್ ಶೀಟ್ ಎಳ್ಕೊಂಡು ಪುನಃ ಮಲ್ಕೊಂಡೆ....