Wednesday, August 8, 2012

ಹಾಗೆ ಸುಮ್ಮನೆ...

ಒಬ್ಬ ವ್ಯಾಪಾರಿ ಎಂದಿನಂತೆ ವಸ್ತುಗಳನ್ನೆಲ್ಲ ಹೆಗಲಿಗೇರಿಸಿ ಮನೆಮನೆಗೆ ಮಾರಲು ಹೊರಟ. ಮಾರನೆ ದಿವಸ ಹಬ್ಬವಿತ್ತು ಆದ್ದರಿಂದ ತನ್ನ ಬಳಿಯಿದ್ದ ಅಷ್ಟೂ ಹಣದಿಂದ ತುಸು ಹೆಚ್ಚೇ ವಸ್ತುಗಳನ್ನು ಖರೀದಿಸಿದ್ದ. ಅವನ ಬಳಿ ಒಂದೂ ನಯಾ ಪೈಸೆಯೂ ಹಣ ಉಳಿದಿರಲಿಲ್ಲ. ಮಾರಾಟದಿಂದ ಬರುವ ಹಣವನ್ನು ತನ್ನ ಖರ್ಚು-ವೆಚ್ಚಗಳಿಗೆ ವಿನಿಯೋಗಿಸಿದರಾಯಿತೆಂದು ಬೀದಿ ಬೀದಿಯಲ್ಲಿ ಮಾರುತ್ತ ಹೊರಟ. ಅವನ ದುರಾದೃಷ್ಟವೋ ಏನೋ ಆ ದಿನ ಸಂಜೆಯಾದರೂ ಯಾವುದೊಂದು ವಸ್ತುವೂ ಮಾರಾಟವಾಗಲಿಲ್ಲ. ಬೆಳಗಿನಿಂದ ಏನನ್ನೂ ತಿನ್ನದ ಕಾರಣ ಹೊಟ್ಟೆ ತುಂಬಾ ಹಸಿಯುತ್ತಿತ್ತು. ಏನು ಮಾಡುವುದೆಂದು ಆಲೋಚಿಸುತ್ತಿದ್ದಾಗ, ಥಟ್ಟನೆ ಒಂದು ಉಪಾಯ ಹೊಳೆಯಿತು. ರಸ್ತೆ ಬದಿಯಲ್ಲಿ ಬಿದ್ದಿದ್ದ ಒಂದೆರಡು ಕಲ್ಲುಗಳನ್ನು ಚೀಲದಲ್ಲಿರಿಸಿಕೊಂಡು ನೇರವಾಗಿ ಎದುರಿನ ಮನೆಯ ಕಡೆ ನಡೆದ. ಹೋದವನೇ ತನ್ನ ಬಳಿ ಇದ್ದ ಅಷ್ಟು ವಸ್ತುಗಳನ್ನು ಆ ಮನೆಯ ಹೆಂಗಸಿಗೆ ತೋರಿಸಿದ, ಆ ಹೆಂಗಸು ಎಲ್ಲವನ್ನು ನೋಡಿ ಇದೆಲ್ಲ ನಮ್ಮ ಬಳಿ ಇವೆ ಹಾಗಾಗಿ ಬೇಡವೆಂದಳು. 

ಆಗ ವ್ಯಾಪಾರಿ ತನಗೆ ಮೊದಲೇ ಹೊಳೆದಿದ್ದ ಉಪಾಯನ್ನು ಇಲ್ಲಿ ಪ್ರಯೋಗಿಸಲು ಮುಂದಾದ. 'ಮೇಡಂ, ನನಗೆ ಕಲ್ಲಿನಿಂದ ರುಚಿಯಾದ ರಸಂ ಮಾಡಲು ಬರುತ್ತದೆ, ನೀವು ಒಪ್ಪಿದರೆ ಅದನ್ನು ನಿಮಗೂ ಕಲಿಸಿಕೊಡುತ್ತೇನೆ' ಎಂದ. ಆ ಹೆಂಗಸು ಆಶ್ಚರ್ಯದಿಂದ ಸರಿ ಬನ್ನಿ ಎಂದು ಅಡುಗೆಮನೆಗೆ ಕರೆದುಕೊಂಡು ಹೋದಳು. ವ್ಯಾಪಾರಿ ಹೋದವನೇ ರಸಂ ಮಾಡುವ ಕೆಲಸವನ್ನು ಶುರುಮಾಡಿದ. ಒಲೆ ಹಚ್ಚಿ, ಪಾತ್ರೆಯಲ್ಲಿ ಸಾಮಾನ್ಯವಾಗಿ ರಸಂ ಮಾಡಲು ಬಳಸುವ ಎಲ್ಲ ವಸ್ತುಗಳನ್ನು ಹಾಕಿ ತದನಂತರ ತನ್ನ ಬಳಿಯಿದ್ದ ಕಲ್ಲುಗಳನ್ನೂ ಪಾತ್ರೆಯಲ್ಲಿ ಹಾಕಿದ. ಸ್ವಲ್ಪ ಹೊತ್ತಿನ ಬಳಿಕ 'ರಸಂ ತಯಾರಿದೆ ಮೇಡಂ, ರುಚಿ ನೋಡಿ' ಎಂದು ಗ್ಲಾಸಿನಲ್ಲಿ ಹಾಕಿಕೊಟ್ಟ. ಆ ಹೆಂಗಸು ಕುಡಿದು ನೋಡಿ 'ಬಹಳ ಚೆನ್ನಾಗಿದೆ, ನೀವು ಕುಡಿಯಿರಿ ಎಂದಳು. ಈ ಸಮಯಕ್ಕಾಗಿಯೇ ಕಾಯುತ್ತಿದ್ದ ವ್ಯಾಪಾರಿ ಸ್ವಲ್ಪ ಕುದಿದಂತವನಂತೆ ನಟಿಸಿ 'ಇದರ ಜೊತೆ ಸ್ವಲ್ಪ ಅನ್ನವಿದ್ದರೆ ಇನ್ನು ರುಚಿಕರವಾಗಿರುತ್ತಿತ್ತು' ಎಂದ. ಕೂಡಲೇ ಆ ಹೆಂಗಸು ತಟ್ಟೆಯಲ್ಲಿ ಅನ್ನವನ್ನು ಹಾಕಿ 'ಈಗ ತಿಂದು ನೋಡಿ' ಎಂದಳು. ಚೆನ್ನಾಗಿದೆ ಇನ್ನು ಸ್ವಲ್ಪ ಅನ್ನ ಹಾಕಿ ಎಂದು ಕೇಳಿ ಹಾಕಿಸಿಕೊಂಡು ಚೆನ್ನಾಗಿ ತಿಂದು ಹೊಟ್ಟೆ ತುಂಬಿಸಿಕೊಂಡು ಮುಂದೆ ನಡೆದ.

ನೀತಿ: ಮನಸಿದ್ದರೆ ಮಾರ್ಗವಿದೆ.

Thursday, July 19, 2012

ಹಾಗೆ ಸುಮ್ಮನೆ...

ಒಂದೂರಲ್ಲಿ ಒಬ್ಬ ಅತಿ ಬುದ್ದಿವಂತನಿದ್ದ. ಅವನೆಷ್ಟು ಬುದ್ದಿವಂತನೆಂದರೆ, ಯಾವುದೇ ವಿಷಯವಾದರೂ ಕ್ಷಣ ಮಾತ್ರದಲ್ಲಿ ಊಹಿಸಿ ಇದೆ ಅದು ಅಂತ ನಿಖರವಾಗಿ ಹೇಳಿಬಿಡುತ್ತಿದ್ದ. ಅವನ ಊಹೆ ಸಂಪೂರ್ಣವಾಗಿ ಸರಿಯಾಗೆ ಇರ್ತಿತ್ತು.

ಒಂದು ದಿನ ತಡ ರಾತ್ರಿ ಕಾರ್ಯನಿಮಿತ್ತ ಯಾವುದೋ ಬೇರೆ ಊರಿಗೆ ಹೋಗಬೇಕಾಗಿ ಬಂತು. ಹಾಗಾಗಿ, ಸ್ಕೂಟರ್ ಏರಿ ಹೊರಟ. ದಾರಿಯಲ್ಲಿ ಹೋಗ್ತಿರಬೇಕಾದರೆ ಒಂದು ಟ್ರಾಕ್ಟರ್ ಎದುರಿನಿಂದ ಎರಡೂ ಕಡೆ ಪ್ರಖರ ದೀಪ ಉರಿಸಿಕೊಂಡು ಬರ್ತಿತ್ತು. ಇವನು ಎಂದಿನಂತೆ ತನ್ನ ಅತಿ ಬುದ್ದಿವಂತಿಕೆ ಉಪಯೋಗಿಸಿ, ಬಹುಶಃ ಎರಡು ಸ್ಕೂಟರ್ ಬರ್ತಿರಬೇಕು ಮಧ್ಯದಿಂದ ನುಗ್ಗಿ ಹೋಗಿಬಿಡೋಣ ಅಂದುಕೊಂಡು ತನ್ನ ಸ್ಕೂಟರನ್ನ ಮಧ್ಯ ನುಗ್ಗಿಸಿದ. ಹೇಗೋ ಟ್ರಾಕ್ಟರ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ದೊಡ್ಡದಾದ ಅಪಘಾತ ತಪ್ಪಿ ಕೇವಲ ಸಣ್ಣಪುಟ್ಟ ಗಾಯಗಳಾಗಿ ಬಚಾವಾದ.

ಇದಾಗಿ ಕೆಲವು ದಿನಗಳ ನಂತರ ಅದೇ ಬುದ್ದಿವಂತನಿಗೆ ಇನ್ನೊಮ್ಮೆ ರಾತ್ರಿ ವೇಳೆ ಬೇರೆ ಊರಿಗೆ ಹೋಗಬೇಕಾಯಿತು. ಎಂದಿನಂತೆ ಸ್ಕೂಟರ್ ಏರಿ ಹೊರಟ. ಹೋಗುತ್ತಿರಬೇಕಾದರೆ ಒಂದು ದೊಡ್ಡ ಹೊಳೆಯ ಸೇತುವೆ ದುರಸ್ತಿ ಕಾರ್ಯ ನಡೆಯುತ್ತಿತ್ತು. ಸೇತುವೆಯ ಎರಡು ಬದಿಯಲ್ಲಿ ಸೂಚನಾ ದೀಪಗಳನ್ನು ಹಾಕಲಾಗಿತ್ತು. ಈ ಮುಂಚಿನ ಅಪಘಾತವನ್ನ ನೆನೆಸಿಕೊಂಡ, ಕಳೆದಬಾರಿಯಂತೆ ಈ ಬಾರಿ ಮೋಸ ಹೊಗಬಾರದು ಎಂದೆಣಿಸಿ ಬಹುಶಃ ಎದುರಿನಿಂದ ಯಾವುದೋ ದೊಡ್ಡ ವಾಹನವೇ ಬರುತ್ತಿರಬೇಕೆಂದು ತನ್ನ ತಪ್ಪು ಗ್ರಹಿಕೆಯಿಂದ ಸ್ಕೂಟರನ್ನ ಪೂರ್ತಿ ಎಡಕ್ಕೆ ತಿರುವಿದ. ಸೇತುವೆಯ ಇಕ್ಕೆಲಗಳಲ್ಲಿ ತಡೆ ಇಲ್ಲದ ಕಾರಣ ಹೊಳೆಗೆ ಬಿದ್ದು ಸತ್ತ. 

ನೀತಿ: ಅತಿ ಬುದ್ದಿವಂತಿಕೆ ಮತ್ತು ಅತೀವ ಆತ್ಮವಿಶ್ವಾಸ ಎರಡೂ ಅಪಾಯಕಾರಿ.

Tuesday, May 8, 2012

ಹಾಗೆ ಸುಮ್ಮನೆ...

ಎಲ್ಲೇ ಇರು, ಹೇಗೆ ಇರು, ಎ೦ದೆ೦ದು ಮನದಲ್ಲಿ ನೀ ತು೦ಬಿರು ಅ೦ತ ಅನ್ಕೊ೦ಡು ನಿನ್ನ ನೆನಪುಗಳೆಲ್ಲವನ್ನು ಹಳೆ ಕಿತ್ತೋಗಿರೊ ಕೋಟಲ್ಲಿಟ್ಟು ಪೆಟ್ಟಿಗೆಯಲ್ಲಿ ತುಂಬಿ ಹಟ್ಟದ ಮೇಲಿಟ್ಟಿದ್ದೆ. ನಿಜವಾಗಲೂ ನಾನೊಬ್ಬ ಮೂರ್ಖ ಅನ್ನಿಸ್ತಿದೆ. ಪ್ರೇಮವು ಬೇಡ, ಪ್ರೇಯಸಿ ಬೇಡ ನೆನಪೆ ಸಾಕೆನಗೆ ಅನ್ನೋಕೆ ನಾನೇನು ಸನ್ಯಾಸಿನೂ ಅಲ್ಲ. ನೀನೇನು ನನಗೆ ಸನ್ಯಾಸತ್ವದ ದೀಕ್ಷೆ ಕೊಟ್ಟ ಗುರುವೂ ಅಲ್ಲ. ನೀನೆ ಜೊತೆ ಇಲ್ಲದ ಮೇಲೆ ನಿನ್ನ ನೆನಪುಗಳನ್ನ ಗುಡ್ಡೆ ಹಾಕ್ಕೊ೦ಡು ನಾನು ಉಪ್ಪಿನಕಾಯಿ ಹಾಕ್ಲಾ?


"ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ" ಅ೦ತ ನಿನಗೆ ಹೇಳಬೇಕು ಅನ್ನೋ ಆಸೆ. ಆದರೆ ಏನ್ ಮಾಡೋದು ನೀನು ನನ್ ಜೊತೆ ಹೊರಗಡೆ ಬರೋದೆಇಲ್ಲವಲ್ಲ?

ನೀನೇ ಬೇಕು ಅನ್ನೋ ಆಸೆ ಇದೆ. ಏನಾದರಾಗಲಿ ನಿನ್ನ ಪಡೆದೇ ಪಡೀತೀನಿ ಅನ್ನೋ ಹಠ-ಕಿಚ್ಚು ನನ್ನಲ್ಲಿದೆ ನಿಜ. ಆದರೆ ಏನ್ ಮಾಡೋದು ಕೆಲವೊಮ್ಮೆ ನೀನಿಲ್ಲದಿದ್ರೆ ಇನ್ನೊಬ್ಬಳು ನಿನಗಿ೦ತ? ಅನ್ನೊ ಭ೦ಡ ನಿರ್ಧಾರ ಮನಸಿನದ್ದು.

ಸಿಗರೇಟ್ ಸೇದುವುದರಿ೦ದ ಬರೋದು ಕೇವಲ ಹೊಗೆ ಮಾತ್ರ ಅಲ್ಲ ಜೊತೆಗೆ ಕ್ಯಾನ್ಸರ್ ಕೂಡ ಅನ್ನೋದು ಗೊತ್ತಿದ್ರೂ ಸಹ ಸಿಗರೇಟ್ ಸೇದೊದನ್ನ ಬಿಡೋಕಾಗಲ್ಲ. ಹಾಗೇನೆ ನಿನ್ನ ನೆನೆಸಿಕೊ೦ಡ್ರೆ ಏನೂ ಪ್ರಯೋಜನವಿಲ್ಲ ವ್ರಥಾ: ನೋವು ಅನ್ನೋದು ಅರಿವಿದ್ದರೂ ಸಹ ನಿನ್ನನ್ನ ಮರೆಯೋಕಾಗಲ್ಲ.

ಕೊನೆಯದಾಗಿ ಒ೦ದು ಮಾತು. ಪ್ರೀತಿ ಮಾಡಿದವರೆಲ್ಲ ಮದುವೆ ಆಗಲೇಬೇಕು ಅ೦ತೇನಿಲ್ಲ. ಹಾಗೇನೆ ಮದುವೆ ಆದೋರೆಲ್ಲ ಕೊನೆವರೆಗೂ ಒಟ್ಟಿಗೇ ಇರುತ್ತಾರೆ ಅನ್ನೋ ನ೦ಬಿಕೆ ಕೂಡ ಇಲ್ಲ. ಮದುವೆ ಆಗಿ ಏನೊ೦ದು ಸುಖ ಸ೦ತೋಷ ಕಾಣದೆ ಬೇರ್ಪಟ್ಟು, ಕೊನೆವರೆಗೂ ಒ೦ಟಿ ಜೀವನವೇ ಸಾಕು ಅ೦ತ ಕಾಲ ಸವೆಸುತ್ತಿರುವ ಎಷ್ಟೋ ನಿದರ್ಶನಗಳು ನನ್ನ ಕಣ್ಣ ಮು೦ದಿವೆ. ಅ೦ತದ್ದರಲ್ಲಿ, ಮದುವೆನೇ ಆಗದಿದ್ದರೂ ನಿನ್ನಿ೦ದ ಭಾಗಶಃ ಎಲ್ಲ ರೀತಿಯ ಸ೦ತೋಷ ಅನುಭವಿಸಿರುವ ನನಗೆ ಕೊನೆವರೆಗೂ ಕೇವಲ ನಿನ್ನ ನೆನಪಲ್ಲೇ ಬದುಕುದೂಡೋದು ಕಷ್ಟವೇನಲ್ಲ ಕಣೆ.

Saturday, March 17, 2012

ಹಾಗೆ ಸುಮ್ಮನೆ...

ಒಮ್ಮೆ ಗೋವಿ೦ದ ಸ್ಕೂಲಿಗೆ ತಡವಾಗಿ ಬ೦ದ. ಮೇಷ್ಟು ಅವನನ್ನ ತಡೆದು ನಿಲ್ಲಿಸಿ ಕೇಳಿದ್ರು "ಯಾಕೋ ಲೇಟು?" ಆಗ ಗೋವಿ೦ದ ಹೇಳಿದ "ನಮ್ಮಪ್ಪ ಸ೦ತೆಗೋಗಿದ್ದ ಸರ್." 'ನಿಮ್ಮಪ್ಪ ಸ೦ತೆಗೋದ್ರೆ ನಿನಗೇನು? ಟೈಮಿಗೆ ಸರಿಯಾಗಿ ಸ್ಕೂಲಿಗೆ ಬರೋದಿಕ್ಕೇನು ನೋವು? ಅ೦ತ ಮೇಷ್ಟ್ರು ಕೇಳಿದ್ರು. ಆಗ ಗೋವಿ೦ದ "ಸಾರ್ ನಮ್ಮನೆಲಿರೋದು ಒ೦ದೇ ಚಡ್ಡಿ. ನಾನು ಸ್ಕೂಲಿಗೆ ಬ೦ದ್ರೆ ನಮ್ಮಪ್ಪ ಹೊರಗಡೆ ಬರುವ ಹಾಗಿಲ್ಲ. ನಮ್ಮಪ್ಪ ಹೊರಗಡೆ ಬ೦ದ್ರೆ ನಾನು ಸ್ಕೂಲಿಗೆ ಬರುವ ಹಾಗಿಲ್ಲ" ಅ೦ದ.
.
.
.
.
.
.
.
ಇನ್ನೊಮ್ಮೆ ಅದೇ ಗೋವಿ೦ದ ಯಥಾಪ್ರಕಾರ ಸ್ಕೂಲಿಗೆ ಲೇಟಾಗಿ ಬ೦ದ. ಆಗ ಪುನಃ ಅದೇ ಮೇಷ್ಟ್ರು ಕೇಳಿದ್ರು "ಇವತ್ಯಾಕೆ ಲೇಟು? ನಿಮ್ಮನೇಲಿರೋದು ಒ೦ದೇ ಅ೦ಗಿನಾ ಏನು?" ಆಗ ಗೋವಿ೦ದ ಹೇಳಿದ "ಇಲ್ಲ ಸಾರ್ ಈಗ ನಮ್ಮಪ್ಪ ನ೦ಗೆ ಒ೦ದು ಜೊತೆ ಹೊಸ ಬಟ್ಟೆ ಹೊಲೆಸಿದ್ದಾನೆ. ಈಗ ಬಟ್ಟೆದೇನು ಪ್ರಾಬ್ಲಮ್ ಇಲ್ಲ ಸಾರ್." 'ಮತ್ತಿನ್ಯಾಕೆ ತಡ?' ಮೇಷ್ಟ್ರು ಕೇಳಿದ್ರು. ಆಗ ಗೋವಿಂದ  "ದಾರಿಯಲ್ಲಿ ಬರುವಾಗ ಯಾರೋ ಒಬ್ಬರು 5 ರೂಪಾಯಿ ಕಾಯಿನ್ ಕಳ್ಕೊ೦ಡಿದ್ರು" ಅಂದ.  ಅದಕ್ಕೆ ಮೇಷ್ಟ್ರು ಹೇಳಿದ್ರು "ಹುಡುಕಿಕೊಟ್ಟು ಬ೦ದ್ಯಾ? ವೆರಿ ಗುಡ್" ಅ೦ದ್ರು. ಗೋವಿ೦ದ ನಿಧಾನವಾಗಿ ಹೇಳಿದ "ಇಲ್ಲ ಸಾರ್, ಆ ಕಾಯಿನ್ ಮೇಲೆ ನಾನು ನಿ೦ತಿದ್ದೆ. ಅವರು ಹುಡುಕಿ ಸಾಕಾಗಿ ಕಾಸು ಸಿಗದೇ ಹೊರಟುಹೋದ್ರು. ಆಮೇಲೆ ನಾನು ಅದನ್ನೆತ್ತಿ ಜೇಬಲ್ಲಿ ಹಾಕ್ಕೊ೦ಡು ಬ೦ದೆ. ಅದಕ್ಕೆ ತಡವಾಯ್ತು ಸರ್" ಅ೦ದ.-ಇಂತ ಇನ್ನು ಅನೇಕ ಹಾಸ್ಯ ತುಣುಕುಗಳನ್ನು ಹೇಳಿ ನಮ್ಮನ್ನ ನಮ್ಮನ್ನ ನಗಿಸಿ, ಜೀವನದಲ್ಲಿ ಉದ್ದಾರವಾಗಿ ಎಂದು ನಮಗೆ ಬೈದು ವಿಧ್ಯೆ-ಬುದ್ದಿ ಹೇಳಿಕೊಟ್ಟ ನಮ್ಮ ಎಲ್ಲ ಗುರುಗಳಿಗೆ ವಂದನೆಗಳು. "ಕಲಿತಿದ್ದೆಲ್ಲವೂ ಅವರಿ೦ದಲೆ. ನಾವು ಜೀವನದಲ್ಲಿ ಏನಾದರು ಒಳ್ಳೆಯದು ಕಲಿತಿದ್ದಿವಿ ಅಂದರೆ ಅದಕ್ಕೆ ಕಾರಣ ಅವರು ಹಾಕಿದ ಅಡಿಪಾಯವೇ ಅಂದರೆ ಅತಿಶಯೋಕ್ತಿ ಅಲ್ಲ."

Tuesday, January 17, 2012

ಹಾಗೆ ಸುಮ್ಮನೆ...

ಒ೦ದೂರಲ್ಲಿ ಇಬ್ಬರು ಮಹಾನ್ ಸುಳ್ಳುಗಾರರಿದ್ರು. ಸುಳ್ಳು ಹೇಳೋದರಲ್ಲಿ ಒಬ್ಬರನ್ನೊಬ್ಬರು ಮೀರಿಸುವ೦ತಿದ್ದರು.
ಒ೦ದುದಿನ ಇಬ್ಬರೂ ಜೊತೆಯಲ್ಲಿ ಹೋಗುತ್ತಿರಬೇಕಾದರೆ ದಾರಿಯಲ್ಲಿ ಒ೦ದು ಬಾವಿ ಇತ್ತು. ಅದನ್ನ ನೋಡಿ ಒಬ್ಬ ಅ೦ದ, "ನೋಡು ನೂರು ವರ್ಷಗಳ ಹಿ೦ದೆ ನಮ್ಮಜ್ಜಿಯ ಕೈಗಡಿಯಾರ ಬಾವಿಯಲ್ಲಿ ಬಿದ್ದಿತ್ತು ಅದು ಮೊನ್ನೆ ಸಿಕ್ತು" ಅ೦ದ. ಅದಕ್ಕೆ ಮತ್ತೊಬ್ಬ "ಹೌದಾ? ನಿನಗಿನ್ನೊ೦ದು ವಿಷಯ ಗೊತ್ತಾ? ನೂರು ವರ್ಷಗಳ ಹಿ೦ದೆ ಇದೆ ಬಾವಿಯಲ್ಲಿ ನಮ್ಮ ಅಜ್ಜ ಬಿದ್ದಿದ್ದ, ಮೊನ್ನೆ ದಿಢೀರನೆ ಎದ್ದು ಬ೦ದ" ಎ೦ದ. ಆಗ ಮೊದಲನೆಯವನು ಆಶ್ಚರ್ಯದಿ೦ದ ಕೇಳಿದ " ಹಾಗದರೆ ಇಷ್ಟು ದಿನ ನಿಮ್ಮಜ್ಜ ಬಾವಿಯಲ್ಲೇನು ಮಾಡ್ತಿದ್ದ?". ಅದಕ್ಕೆರಡನೆಯವನು "ನಿಮ್ಮಜ್ಜಿ ಕೈಗಡಿಯಾರಕ್ಕೆ ಕೀ ಕೊಡ್ತಿದ್ದ" ಅ೦ದನಂತೆ...
************************************************************************************************
ಇನ್ನೊಂದು ದಿನ ಅದೇ ಇಬ್ಬರೂ ಸುಳ್ಳುಗಾರರು ಯಥಾಪ್ರಕಾರ ದಾರಿಯಲ್ಲಿ ನಡೆದು ಹೋಗುತ್ತಿದ್ದರು. ಒಬ್ಬ ಕಳೆದ ಬಾರಿ ಆಗಿರುವ ಅವಮಾನಕ್ಕೆ ಪ್ರತಿಕಾರ ಪಡೆಯಲೇಬೇಕು ಅಂತ ತನ್ನ ಸುಳ್ಳಿನ ಸರಮಾಲೆಯನ್ನ ಶುರುವಿಟ್ಟುಕೊಂಡ. "ನಿನಗೊಂದು ವಿಷಯ ಗೊತ್ತಾ?" ಅಂದ. ಅದಕ್ಕೆ ಮತ್ತೊಬ್ಬ 'ಏನು' ಅಂತ ಕೇಳಿದ. "ಹಿಂದೆ ನಮ್ಮಜ್ಜ ಒಂದು ಕುದುರೆ ಸಾಕಿದ್ದ. ಅದು ಹೇಗಿತ್ತು ಅಂದರೆ ಅದಕ್ಕಾಗಿ ಮೈಸೂರಿಂದ ಮದ್ರಾಸಿನವರೆಗೂ ಲಾಯ ಕಟ್ಟಿಸಿದ್ದ" ಅಂದಅದಕ್ಕೆ ಮತ್ತೊಬ್ಬ ನಾನೇನು ಕಡಿಮೆ ಇಲ್ಲ ಅನ್ಕೊಂಡು 'ನಿನಗಿನ್ನೊಂದು ವಿಷಯ ಗೊತ್ತ? ನಮ್ಮಜ್ಜ ಒಂದು ಭರ್ಜಿ ಇಟ್ಟಿದ್ದ, ಅದು ಎಷ್ಟು ಉದ್ದ ಇತ್ತು ಅಂದರೆ ಮಳೆ ಬಂದಿಲ್ಲ ಅಂದ್ರೆ ಅದನ್ನ ತಗೆದುಕೊಂಡು ಮೋಡಕ್ಕೆ ಚುಚ್ಚಿಬಿಡುತ್ತಿದ್ದ ಧಾರಾಕಾರವಾಗಿ ಮಳೆ ಸುರಿಯೋದು' ಅಂದಆಗ ಮೊದಲನೆಯವನು ಎಂದಿನಂತೆ ಆಶ್ಚರ್ಯವಾಗಿ ಕೇಳಿದ "ಹಾಗಾದ್ರೆ ಅಷ್ಟು ಉದ್ದದ ಭರ್ಜಿಯನ್ನ ಎಲ್ಲಿಡುತ್ತಿದ್ದ?" ಆಗ ಮತ್ತೊಬ್ಬ ಹೇಳಿದ 'ನಿಮ್ಮಜ್ಜ ಲಾಯ ಕಟ್ಟಿದ್ದನಲ್ಲ ಅದರ ಹಿಂದೆ ಇಡುತ್ತಿದ್ದ' ಅಂದನಂತೆ...
********************************************************************************************
********************************************************************************************