Thursday, July 19, 2012

ಹಾಗೆ ಸುಮ್ಮನೆ...

ಒಂದೂರಲ್ಲಿ ಒಬ್ಬ ಅತಿ ಬುದ್ದಿವಂತನಿದ್ದ. ಅವನೆಷ್ಟು ಬುದ್ದಿವಂತನೆಂದರೆ, ಯಾವುದೇ ವಿಷಯವಾದರೂ ಕ್ಷಣ ಮಾತ್ರದಲ್ಲಿ ಊಹಿಸಿ ಇದೆ ಅದು ಅಂತ ನಿಖರವಾಗಿ ಹೇಳಿಬಿಡುತ್ತಿದ್ದ. ಅವನ ಊಹೆ ಸಂಪೂರ್ಣವಾಗಿ ಸರಿಯಾಗೆ ಇರ್ತಿತ್ತು.

ಒಂದು ದಿನ ತಡ ರಾತ್ರಿ ಕಾರ್ಯನಿಮಿತ್ತ ಯಾವುದೋ ಬೇರೆ ಊರಿಗೆ ಹೋಗಬೇಕಾಗಿ ಬಂತು. ಹಾಗಾಗಿ, ಸ್ಕೂಟರ್ ಏರಿ ಹೊರಟ. ದಾರಿಯಲ್ಲಿ ಹೋಗ್ತಿರಬೇಕಾದರೆ ಒಂದು ಟ್ರಾಕ್ಟರ್ ಎದುರಿನಿಂದ ಎರಡೂ ಕಡೆ ಪ್ರಖರ ದೀಪ ಉರಿಸಿಕೊಂಡು ಬರ್ತಿತ್ತು. ಇವನು ಎಂದಿನಂತೆ ತನ್ನ ಅತಿ ಬುದ್ದಿವಂತಿಕೆ ಉಪಯೋಗಿಸಿ, ಬಹುಶಃ ಎರಡು ಸ್ಕೂಟರ್ ಬರ್ತಿರಬೇಕು ಮಧ್ಯದಿಂದ ನುಗ್ಗಿ ಹೋಗಿಬಿಡೋಣ ಅಂದುಕೊಂಡು ತನ್ನ ಸ್ಕೂಟರನ್ನ ಮಧ್ಯ ನುಗ್ಗಿಸಿದ. ಹೇಗೋ ಟ್ರಾಕ್ಟರ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ದೊಡ್ಡದಾದ ಅಪಘಾತ ತಪ್ಪಿ ಕೇವಲ ಸಣ್ಣಪುಟ್ಟ ಗಾಯಗಳಾಗಿ ಬಚಾವಾದ.

ಇದಾಗಿ ಕೆಲವು ದಿನಗಳ ನಂತರ ಅದೇ ಬುದ್ದಿವಂತನಿಗೆ ಇನ್ನೊಮ್ಮೆ ರಾತ್ರಿ ವೇಳೆ ಬೇರೆ ಊರಿಗೆ ಹೋಗಬೇಕಾಯಿತು. ಎಂದಿನಂತೆ ಸ್ಕೂಟರ್ ಏರಿ ಹೊರಟ. ಹೋಗುತ್ತಿರಬೇಕಾದರೆ ಒಂದು ದೊಡ್ಡ ಹೊಳೆಯ ಸೇತುವೆ ದುರಸ್ತಿ ಕಾರ್ಯ ನಡೆಯುತ್ತಿತ್ತು. ಸೇತುವೆಯ ಎರಡು ಬದಿಯಲ್ಲಿ ಸೂಚನಾ ದೀಪಗಳನ್ನು ಹಾಕಲಾಗಿತ್ತು. ಈ ಮುಂಚಿನ ಅಪಘಾತವನ್ನ ನೆನೆಸಿಕೊಂಡ, ಕಳೆದಬಾರಿಯಂತೆ ಈ ಬಾರಿ ಮೋಸ ಹೊಗಬಾರದು ಎಂದೆಣಿಸಿ ಬಹುಶಃ ಎದುರಿನಿಂದ ಯಾವುದೋ ದೊಡ್ಡ ವಾಹನವೇ ಬರುತ್ತಿರಬೇಕೆಂದು ತನ್ನ ತಪ್ಪು ಗ್ರಹಿಕೆಯಿಂದ ಸ್ಕೂಟರನ್ನ ಪೂರ್ತಿ ಎಡಕ್ಕೆ ತಿರುವಿದ. ಸೇತುವೆಯ ಇಕ್ಕೆಲಗಳಲ್ಲಿ ತಡೆ ಇಲ್ಲದ ಕಾರಣ ಹೊಳೆಗೆ ಬಿದ್ದು ಸತ್ತ. 

ನೀತಿ: ಅತಿ ಬುದ್ದಿವಂತಿಕೆ ಮತ್ತು ಅತೀವ ಆತ್ಮವಿಶ್ವಾಸ ಎರಡೂ ಅಪಾಯಕಾರಿ.