Friday, July 22, 2011

ಹಾಗೆ ಸುಮ್ಮನೆ....

ಸುಮಾರು ಒಂದೂವರೆ ವರ್ಷದಿಂದ ಪ್ರಯತ್ನ ಮಾಡ್ತಿದ್ದೆ. ಇದೇನಾ ಜೀವನ? ಯಾರಿಗ್ಬೇಕು ಈ ಜಂಜಾಟ? ದಿನ ಅದೇ ಕೆಲಸ, ಅದೇ ಮುಖಗಳು ಮತ್ತೆ ಅದೇ ನಾಟಕಗಳು. ಈ ಜೀವನ ಶೈಲಿ ಸಾಕು. ಯಾವುದೋ ಒಂದು ಕಡೆ ಹೋಗಿ ಯಾಂತ್ರಿಕ ಬದುಕಿಗೆ ತಿಲಾಂಜಲಿ ಇಟ್ಟು ಆರಾಮಾಗಿ ಇದ್ದು ಬಿಡೋಣ ಅನ್ಕೊತಿದ್ದೆ... ಆಗ ನೆನಪಾಗಿದ್ದೆ ಗೌತಮ ಬುದ್ಧ. ಆಗಿಂದ ಪ್ರತಿ ರಾತ್ರಿ ಮಲಗೋವಾಗ, ಏನಾದ್ರು ಆಗ್ಲಿ ನಾನು ಬುದ್ಧನ ತರ ಅರ್ಧ ರಾತ್ರಿಲಿ ಎದ್ದು ಓಡಿ ಹೋಗೋಣ ಅನ್ನಿಸ್ತಿತ್ತು.... ಆದ್ರೆ ಏನ್ ಮಾಡೋದು ಬಡ್ಡಿಮಗಂದು ಮಲ್ಕೊಂಡ ಮೇಲೆ ಅರ್ಧ ರಾತ್ರಿಲಿ ಎಚ್ಚರನೇ ಆಗಿರಲಿಲ್ಲ....

ಅದೇನೋ ಹೇಳಿದಹಾಗೆ, ಅಂತು ಇಂತೂ ಮೊನ್ನೆ ಒಂದು ದಿನ ಅರ್ಧ ರಾತ್ರಿಲಿ ಎಚ್ಚರ ಆಯಿತು. ಎದ್ದು ಹಾಸಿಗೆ ಮೇಲೆ ಕೂತ್ಕೊಂಡೆ. ಇನ್ನೇನು ಎದ್ದಿದ್ದು ಆಗಿದೆ ಇನ್ನು ಬುದ್ಧನ ಹಾಗೆ ಎಲ್ಲವನ್ನು ಬಿಟ್ಟು ಓಡಿ ಹೋಗೋದೇ ಅನ್ಕೊಂಡು ಸುತ್ತ ಒಂದುಸಲ ಕಣ್ಣಾಡಿಸಿದೆ... ಮನೆಯೆಲ್ಲ ಖಾಲಿ ಖಾಲಿ, ಇರೋದೇ ನಾನೊಬ್ಬ!. ಮಧ್ಯರಾತ್ರಿ ಚಳಿಯಾಗ್ತಿತ್ತು. ಛೆ! ಯಾರು ಇಲ್ಲವಲ್ಲ? ಇನ್ಯಾರನ್ನ ಬಿಟ್ಟೋಗೋದು?  ಅನ್ಕೊಂಡು ಬೆಂಕಿ ಕಡ್ಡಿ ಗೀರಿ ಸಿಗರೇಟ್ ಹಚ್ಚಿ ಒಂದೆರಡು ಧಂ ಎಳೆದು ಮೈ ತುಂಬಾ ಬೆಡ್ ಶೀಟ್ ಎಳ್ಕೊಂಡು ಪುನಃ ಮಲ್ಕೊಂಡೆ....

Tuesday, July 12, 2011

ಹಾಗೆ ಸುಮ್ಮನೆ....

ಬಹಳ ದಿನವಾಯ್ತು ಬ್ಲಾಗ್ ಗೆ ಬಂದು, ಏನನ್ನು ಬರೆಯಲಿಕ್ಕೆ ಆಗಿರಲಿಲ್ಲ. ತುಂಬಾ ವಿಷಯಗಳಿದ್ರೂ ಸಹ ಬರೆಯಲು ಕುಳಿತುಕೊಳ್ಳುವಷ್ಟು ವ್ಯವಧಾನ ಇರಲಿಲ್ಲ. ಆಫೀಸಲ್ಲಿ ತುಂಬಾ ಕೆಲಸ ಇತ್ತು. ಸರಿ ಈದಿನವಾದ್ರು ಏನಾದ್ರೂ ಬರೆಯೋಣ ಅನ್ಕೊಂಡು ಕುಳಿತುಕೊಂಡೆ. ಬರೆದದ್ದು ನಾನೇ ಅದ್ದರಿಂದ ಅಪ್ರಿಯವಾದರೆ ದಯವಿಟ್ಟು ಮನಸಿಗೆ ಹಾಕೊಳ್ಳಬೇಡಿ. ಇದಕ್ಕೆ ಶೀರ್ಷಿಕೆ ಏನಂತ ಇಡೋದು ಅಂತ ತಲೆ ಕೆರ್ಕೊಂಡು ಕುಳಿತಿರೋವಾಗ ಥಟ್ಟನೆ ನನ್ನ ಹಳೆಯ ಶೀರ್ಷಿಕೆ ನೆನಪಾಗಿ ಅದನ್ನೇ ಇಟ್ಟಿದ್ದೀನಿ. ದಯವಿಟ್ಟು ಇದನ್ನ ಬಿಟ್ರೆ ಬೇರೆ ಏನು ಗೊತ್ತಿಲ್ವ? ಅನ್ಕೋಬೇಡಿ. ಯಾಕಂದ್ರೆ ವಾಸ್ತವವಾಗಿ ವಿಷಯವೇ ಆ ರೀತಿ ಇದೆ.

ಅದೇನಾಯ್ತು ಅಂದ್ರೆ ನಿನ್ನೆ ರಾತ್ರಿ ಆಫೀಸ್ ಕೆಲಸ ಮುಗಿಸಿಕೊಂಡು ಮನೆ ಕಡೆ ಹೊರಟಿದ್ದೆ, ರಾತ್ರಿ ಊಟದ ಸಮಯ ಆಗಿತ್ತು(ಸಾಧಾರಣವಾಗಿ ನನಗೆ ಊಟಕ್ಕೆ ಅಂತ ಸಮಯ ಇರೋಲ್ಲ, ಆದರೂ ಅದೊಂದು ನಿಯಮ ಅಲ್ವೇ?). ಏನಾದ್ರೂ ಕಟ್ಟಿಸಿಕೊಳ್ಳೋಣ ಅನ್ಕೊಂಡು ಬರ್ತಿದ್ದೆ. ಬೆಂದಕಾಳುರೆಂಬ ಬೆಂಗಳೂರಲ್ಲಿ ಮೊದಲೇ ನಾನು ಏಕಾಂಗಿ ಸಂಚಾರಿ. ಬಹುಶಃ ಬೆಂಕಿಗೂ ನನಗೂ ಏನೋ ಒಂದು ರೀತಿಯಲ್ಲಿ ಆಗಿಬರೋಲ್ಲ. ಆದ್ದರಿಂದ ಮನೆಯಲ್ಲಿ ಓಲೆ ಹಚ್ಹ್ಹೊಲ್ಲ. ಆದ್ರೆ ಬೆಂಕಿ ಕಡ್ಡಿಯಿಂದ ಸಿಗರೇಟ್ ಹಚ್ಚೋದು ನನಗೇ ಬಹಳ ಸಲೀಸು.  ಅಯ್ಯೋ ಸುಮ್ನೆ ಏನೇನೋ ಹೇಳ್ತಿದ್ದೀನಿ. ವಿಷಯಕ್ಕೆ ಬರ್ತೀನಿ.

ಊಟದ ಸಮಯವಾದ್ದರಿಂದ ಏನು ತಗೋಳೋದು ಅನ್ನೋ ಯೋಚನೆಯಲ್ಲಿದ್ದೆ. ಆಗ ಮೈಸೂರ್ ನೆನಪಾಯ್ತು, ಇರಲಿ ಅಂತ ಒಂದೆರಡು ಪೀಸ್ ಮೈಸೂರ್ ಪಾಕ್ ತಗೊಂಡೆ. ಆಮೇಲೆ ಹಾಗೆ ಯೋಚನೆ ಮಾಡೋವಾಗ ನನ್ನವಳು ನೆನಪಾದಳು. ಸರಿ ಅನ್ಕೊಂಡು ಅವಳಿಷ್ಟದ ಮಸಾಲೆ ದೋಸೆ ಕಟ್ಟಿಸಿಕೊಂಡೆ. ಅದೇನು ಗ್ರಹಚಾರವೋ ಏನೋ? ಒಂದೇ ಸಲ ಅವಳ ಮನೆಯ ಎಲ್ಲರೂ ನೆನಪಾಗಿಬಿಡೋದಾ? ಮೊದಲಿಗೆ ಅವಳ ತಮ್ಮ, ಸರಿ ಒಂದು ಪ್ಲೇಟ್ ಪಾನಿ ಪುರಿ ಕಟ್ಟು ಅಂದೆ, ಆಮೇಲೆ ಅವಳಣ್ಣ, ಸರಿ ಒಂದು ಪ್ಲೇನ್ ದೋಸೆ, ಆಮೇಲೆ ಅವರಮ್ಮ? ಸರಿ ಪಕ್ಕದ ಹೋಟೆಲಿಗೆ ಹೋಗಿ ಒಂದು ತಲೆ ಮಾಂಸ. ಕೊನೆದಾಗಿ ಅವರಪ್ಪ ನೆನಪಾಗಿಬಿಡೋದ? ಸರಿ ಇನ್ನೇನು ಮಾಡೋದು? ನನಗೆ ಇನ್ನು ಬೇರೆ ತಿಂಡಿ ತಗೊಂಡ್ರೆ ತಿನ್ನೋಕಾಗೋಲ್ಲ ಅನ್ಕೊಂಡು ಅಲ್ಲೇ ಪಕ್ಕದಲ್ಲೇ ಇದ್ದ ಬಾರ್ ಗೆ ನುಗ್ಗಿದೆ. ಒಂದು ಕ್ವಾಟರ್ ವಿಸ್ಕಿ ಕೊಂಡೆ. ಅಮೆಲೆನಾಯ್ತು ಅಂತೀರಾ? ಇನ್ನೇನಾಗುತ್ತೆ? ಮನೆಗೋಗಿ ವಿಸ್ಕಿ ಕುಡಿದು, ಅರ್ಧಂಬರ್ದ ಊಟ ಮಾಡಿ ಹಾಸಿಗೆ ಮೇಲೆ ಉರುಳಿಕೊಂಡೆ.