Tuesday, January 17, 2012

ಹಾಗೆ ಸುಮ್ಮನೆ...

ಒ೦ದೂರಲ್ಲಿ ಇಬ್ಬರು ಮಹಾನ್ ಸುಳ್ಳುಗಾರರಿದ್ರು. ಸುಳ್ಳು ಹೇಳೋದರಲ್ಲಿ ಒಬ್ಬರನ್ನೊಬ್ಬರು ಮೀರಿಸುವ೦ತಿದ್ದರು.
ಒ೦ದುದಿನ ಇಬ್ಬರೂ ಜೊತೆಯಲ್ಲಿ ಹೋಗುತ್ತಿರಬೇಕಾದರೆ ದಾರಿಯಲ್ಲಿ ಒ೦ದು ಬಾವಿ ಇತ್ತು. ಅದನ್ನ ನೋಡಿ ಒಬ್ಬ ಅ೦ದ, "ನೋಡು ನೂರು ವರ್ಷಗಳ ಹಿ೦ದೆ ನಮ್ಮಜ್ಜಿಯ ಕೈಗಡಿಯಾರ ಈ ಬಾವಿಯಲ್ಲಿ ಬಿದ್ದಿತ್ತು ಅದು ಮೊನ್ನೆ ಸಿಕ್ತು" ಅ೦ದ. ಅದಕ್ಕೆ ಮತ್ತೊಬ್ಬ "ಹೌದಾ? ನಿನಗಿನ್ನೊ೦ದು ವಿಷಯ ಗೊತ್ತಾ? ನೂರು ವರ್ಷಗಳ ಹಿ೦ದೆ ಇದೆ ಬಾವಿಯಲ್ಲಿ ನಮ್ಮ ಅಜ್ಜ ಬಿದ್ದಿದ್ದ, ಮೊನ್ನೆ ದಿಢೀರನೆ ಎದ್ದು ಬ೦ದ" ಎ೦ದ. ಆಗ ಮೊದಲನೆಯವನು ಆಶ್ಚರ್ಯದಿ೦ದ ಕೇಳಿದ " ಹಾಗದರೆ ಇಷ್ಟು ದಿನ ನಿಮ್ಮಜ್ಜ ಬಾವಿಯಲ್ಲೇನು ಮಾಡ್ತಿದ್ದ?". ಅದಕ್ಕೆರಡನೆಯವನು "ನಿಮ್ಮಜ್ಜಿ ಕೈಗಡಿಯಾರಕ್ಕೆ ಕೀ ಕೊಡ್ತಿದ್ದ" ಅ೦ದನಂತೆ...
************************************************************************************************
ಇನ್ನೊಂದು ದಿನ ಅದೇ ಇಬ್ಬರೂ ಸುಳ್ಳುಗಾರರು ಯಥಾಪ್ರಕಾರ ದಾರಿಯಲ್ಲಿ ನಡೆದು ಹೋಗುತ್ತಿದ್ದರು. ಒಬ್ಬ ಕಳೆದ ಬಾರಿ ಆಗಿರುವ ಅವಮಾನಕ್ಕೆ ಪ್ರತಿಕಾರ ಪಡೆಯಲೇಬೇಕು ಅಂತ ತನ್ನ ಸುಳ್ಳಿನ ಸರಮಾಲೆಯನ್ನ ಶುರುವಿಟ್ಟುಕೊಂಡ. "ನಿನಗೊಂದು ವಿಷಯ ಗೊತ್ತಾ?" ಅಂದ. ಅದಕ್ಕೆ ಮತ್ತೊಬ್ಬ 'ಏನು' ಅಂತ ಕೇಳಿದ. "ಹಿಂದೆ ನಮ್ಮಜ್ಜ ಒಂದು ಕುದುರೆ ಸಾಕಿದ್ದ. ಅದು ಹೇಗಿತ್ತು ಅಂದರೆ ಅದಕ್ಕಾಗಿ ಮೈಸೂರಿಂದ ಮದ್ರಾಸಿನವರೆಗೂ ಲಾಯ ಕಟ್ಟಿಸಿದ್ದ" ಅಂದ.  ಅದಕ್ಕೆ ಮತ್ತೊಬ್ಬ ನಾನೇನು ಕಡಿಮೆ ಇಲ್ಲ ಅನ್ಕೊಂಡು 'ನಿನಗಿನ್ನೊಂದು ವಿಷಯ ಗೊತ್ತ? ನಮ್ಮಜ್ಜ ಒಂದು ಭರ್ಜಿ ಇಟ್ಟಿದ್ದ, ಅದು ಎಷ್ಟು ಉದ್ದ ಇತ್ತು ಅಂದರೆ ಮಳೆ ಬಂದಿಲ್ಲ ಅಂದ್ರೆ ಅದನ್ನ ತಗೆದುಕೊಂಡು ಮೋಡಕ್ಕೆ ಚುಚ್ಚಿಬಿಡುತ್ತಿದ್ದ ಧಾರಾಕಾರವಾಗಿ ಮಳೆ ಸುರಿಯೋದು' ಅಂದ.  ಆಗ ಮೊದಲನೆಯವನು ಎಂದಿನಂತೆ ಆಶ್ಚರ್ಯವಾಗಿ ಕೇಳಿದ "ಹಾಗಾದ್ರೆ ಅಷ್ಟು ಉದ್ದದ ಭರ್ಜಿಯನ್ನ ಎಲ್ಲಿಡುತ್ತಿದ್ದ?" ಆಗ ಮತ್ತೊಬ್ಬ ಹೇಳಿದ 'ನಿಮ್ಮಜ್ಜ ಲಾಯ ಕಟ್ಟಿದ್ದನಲ್ಲ ಅದರ ಹಿಂದೆ ಇಡುತ್ತಿದ್ದ' ಅಂದನಂತೆ...
********************************************************************************************
********************************************************************************************

Saturday, November 26, 2011

ಹಾಗೆ ಸುಮ್ಮನೆ...

ಮರೆವು:
ನನ್ನವಳ ನೆನಪಿನ ಹಾವಳಿ ತಾಳಲಾರದೆ ಎಲ್ಲವನ್ನೂ ಮರೆತು ಬಿಡೋಣ ಅ೦ತ ಮರೆವಿನ ಚಾಳಿ ರೂಢಿಸಿಕೊ೦ಡೆ. ಅದರ ಪರಿಣಾಮ ಎಷ್ಟಿದೆ ಅ೦ದ್ರೆ ಮೊನ್ನೆ ಪಾರ್ಕಿ೦ಗ್ ಲಾಟಲ್ಲಿ ಗಾಡಿ ಹಾಕಿ ಕೀ ನ ಗಾಡಿಯಲ್ಲೆ ಬಿಟ್ಟು ಬ೦ದಿದ್ದೆ. ನಿನ್ನೆ ಪ್ಯಾ೦ಟ್ ಹಾಕ್ಕೊ೦ಡು ಜಿಪ್ ಹಾಕೋದನ್ನೇ ಮರೆತಿದ್ದೆ.
********************************************************************************


ಹಿ೦ದಿನ ರಾತ್ರಿ ಸಲ್ಪ ಜಾಸ್ತಿನೇ ಕುಡಿದಿದ್ದರಿ೦ದ ಬೆಳಿಗ್ಗೆ ಹಾಸಿಗೆಯಿ೦ದ ಎದ್ದೇಳುವಾಗ ತಲೆ ಸಿಕ್ಕಾಪಟ್ಟೆ ಭಾರ ಅನ್ನಿಸ್ತಿತ್ತು. ಆಗ "ದೇವ್ರಾಣೆಗೂ ಇನ್ಮೇಲೆ ಕುಡಿಯೊಲ್ಲ" ಅನ್ಕೊ೦ಡೆ. ಅದೇ ದಿನ ಸ೦ಜೆ ಕೆಲಸ ಮುಗಿಸಿ ಮನೆಗೆ ಹೋಗುವಾಗ ಯಥಾಪ್ರಕಾರ ಸೀದಾ ಬಾರಿಗೆ ಹೋದವನೇ ಕುಡಿಯೋಕೆ ಶುರುವಿಟ್ಟುಕೊ೦ಡೆ. ಬೆಳಿಗ್ಗೆ ಆಣೆ ಮಾಡಿಕೊ೦ಡಿದ್ದು ನೆನಪಿಗೆ ಬರಲೇ ಇಲ್ಲ.
********************************************************************************


ಆಫೀಸ್ ಕೆಲಸ ಮುಗಿಸಿ ನಾನು ಮತ್ತು ನನ್ನ ಸಹೋದ್ಯೋಗಿ ಇಬ್ಬರೂ ಮನೆಕಡೆ ಹೋಗ್ತಾ ಇದ್ದೆವು. ದಾರಿಯಲ್ಲಿ ಬಾರ್ ಮು೦ದೆ ಜಾಸ್ತಿ ಕುಡಿದವನನ್ನು ಸುಮಾರಾಗಿ ಕುಡಿದವನೊಬ್ಬ ಮನೆಗೆ ಕರೆದುಕೊ೦ಡು ಹೋಗಲು ಹಿಡಿದು ಎಳೆದಾಡುತಿದ್ದ. 'ನಾ ಕೊಡೆ ನೀ ಬಿಡೆ" ಅನ್ನೋ ಹಾಗೆ, ಅವ್ನು ಬರೊಲ್ಲ, ಇವ್ನು ಬಿಡೊಲ್ಲ. ಇದನ್ನ ನೋಡಿ ನನ್ನ ಸಹೋದ್ಯೋಗಿ ಮಿತ್ರರು  "ಕುಡಿದಾಗ ಇದೊ೦ದು ರೋದನೆ, ಹಾವಳಿ" ಅ೦ತ ಏನೇನೊ ಹೇಳ್ತಾ ಇದ್ರು. ನ೦ತರದ ಅರ್ಧಗ೦ಟೆಯಲ್ಲಿ ಅದೇ ಬಾರ್ ಮು೦ದೆ ನಮ್ಮಿಬ್ಬರ ಪರಿಸ್ಥಿತಿ ಕೂಡ ಅವರಿಬ್ಬರಿಗಿ೦ತ ಏನೂ ಭಿನ್ನವಾಗಿರಲಿಲ್ಲ.
********************************************************************************

ವಿಪರ್ಯಾಸ:
ದಿನಾ ಬೆಳಿಗ್ಗೆ ಕೆಲಸ ಶುರುವಾಗೋಕೆ ಅರ್ಧಗ೦ಟೆ ಮು೦ಚೆ ಬರ್ತಿದ್ದೆ, ಆಗೆಲ್ಲ ಏನೂ ಅ೦ತ ಕೆಲಸ ಇರ್ತಿರಲಿಲ್ಲ. ಆದ್ರೆ, ಈಹೊತ್ತು ಅರ್ಧಗ೦ಟೆ ತಡವಾಗಿ ಬ೦ದೆ. ಅಷ್ಟೊತ್ತಿಗಾಗಲೇ ಮುಖ್ಯವಾದ ಕೆಲಸ ಇದೆ ಬೇಗ ಬನ್ನಿ ಅ೦ತ ಬಾಸ್ ಫೋನ್ ಮಾಡಿದ್ರು.
********************************************************************************

Tuesday, November 1, 2011

ಕನ್ನಡವೇ ಸತ್ಯ.. ಕನ್ನಡವೇ ನಿತ್ಯ...

ಜೈ ಭುವನೇಶ್ವರಿ....
ಜಯಹೇ ಕರ್ನಾಟಕ ಮಾತೆ...
ಸಿರಿಗನ್ನಡಂ ಗೆಲ್ಗೆ... ಸಿರಿಗನ್ನಡಂ ಬಾಳ್ಗೆ...
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.....

Saturday, October 15, 2011

ಹಾಗೆ ಸುಮ್ಮನೆ...

ನಮ್ಮ ಮನಸಿನ ನಡವಳಿಕೆ ತೀರಾ ವಿಚಿತ್ರ ಅಲ್ವ? ಮಂಗನಿಂದ ಮಾನವ ಅಂತಾರೆ ಮನುಷ್ಯ ಬದಲಾಗಿದ್ರು ಸಹ ಮನಸ್ಸಿನಿಂದ ಇನ್ನು ಮಂಗನ ಬುದ್ದಿ ಹೋಗಿಲ್ಲ ಅನ್ಸುತ್ತೆ. ಬೇರೆಯವರ ಮನಸಿನ ಬಗ್ಗೆ ನನಗಷ್ಟು ಗೊತ್ತಿಲ್ಲ. ಆದ್ರೆ ನನ್ ಮನಸ್ಸಂತೂ ಇನ್ನು ಮಂಗನ ಬುದ್ದಿ ಕಳಕೊಂಡಿಲ್ಲ. ಯಾಕೇಳ್ತೀನಿ ಅಂದ್ರೆ, ಮುಂಚೆ ಎಲ್ಲ ಏನಾದ್ರೂ ಬರೆಯೋ ಉತ್ಸಾಹ ತುಂಬಾ ಇರ್ತಿತ್ತು, ಆದ್ರೆ ಬರೆಯೋಕೆ ಪುರುಷೋತ್ತು ಸಿಕ್ತಿರಲಿಲ್ಲ. ಈಗ ಕಳೆದೊಂದು ತಿಂಗಳಿಂದ ನನಗೆ ಬಿಡುವೋ ಬಿಡುವು, ಆದ್ರೆ ಏನಾದ್ರೂ ಬರೆಯೋ ಮನಸಿಲ್ಲ. ಇದಕ್ಕೆ ಇರಬೇಕು ಜನ ಹೇಳೋದು "ಹಲ್ಲಿದ್ದಾಗ ಕಡಲೆ ಸಿಗೋಲ್ಲ, ಕಡಲೆ ಸಿಕ್ಕಾಗ ಹಲ್ಲೆ ಇರೋಲ್ಲ (ಮಾರ್ಪಾಡಾಗಿದೆ ಕ್ಷಮಿಸಿ)" ಅಂತ.

ಇರಲಿ, ಆದರೂ ಏನಾದ್ರೂ ಬರೆಯಬೇಕು ಅನ್ಕೊಂಡೆ ಯಾಕಂದ್ರೆ ನನಗೆ ಬಿಡುವು ಇನ್ನೊಂದೇ ದಿನ ಅಷ್ಟೇ. ಏನು ಬರೆಯೋಣ ಅಂತ ಯೋಚಿಸುತ್ತಿರಬೇಕಾದರೆ ಹೊಸದೇನು ಹೊಳೆಯಲಿಲ್ಲ, ಹಾಗಾಗಿ ಎಂದೋ ಓದಿದ್ದ ಒಂದು ಹಳೆಯ ಝೆನ್ ಕಥೆನೇ  ಬರೆದು ಬಿಡೋಣ ಅನ್ನಿಸಿ ಅದನ್ನೇ ಬರೀತಿದೀನಿ. ಚಿಕ್ಕದಾಗಿದ್ರು ಚೆನ್ನಾಗಿದೆ. ನನಗೆ ಹಿಡಿಸ್ತು, ನಿಮಗೂ ಹಿಡಿಸಬೇಕು ಅಂತೇನಿಲ್ಲ! ಯಾಕಂದ್ರೆ ನಾನು ಬರಿತಿರೋದು ಹಾಗೆ ಸುಮ್ಮನೆ!

ಒಂದಾನೊಂದು ಕಾಲದಲ್ಲಿ (ನಿರ್ದಿಷ್ಟವಾಗಿ ಅದು ಯಾವ ಕಾಲ ಅಂತ ದೇವರಾಣೆಗೂ ನಂಗೊತ್ತಿಲ್ಲ) ಯಥಾ ಪ್ರಕಾರ ಒಬ್ಬ ಝೆನ್ ಗುರುಗಳಿದ್ರು. ಗುರುಗಳು ಅಂದಮೇಲೆ ನಿಮಗೆ ಗೊತ್ತಲ್ಲ? ಗುರುಕುಲ, ಶಿಷ್ಯವೃಂದ ಎಲ್ಲವೂ ಇರುತ್ತೆ. ತಥಾ ಪ್ರಕಾರ ಅಲ್ಲೂ ಇತ್ತು. ಆ ಗುರುಗಳು ತಮ್ಮೆಲ್ಲ ಶಿಷ್ಯರಿಗೆ ಬೋಧನೆ ಮಾಡುತ್ತಾ ಎಲ್ಲರನ್ನು ಸನ್ಮಾರ್ಗದಲ್ಲಿ ನಡೆಸುವ ಕಾರ್ಯದಲ್ಲಿದ್ರು. ಅವರ ಶಿಷ್ಯಕೋಟಿಯಲ್ಲಿ ಒಬ್ಬ ಶಿಷ್ಯ ಇದ್ದ. ಮೊಂಡ ಅಂತಾನೆ ಭಾವಿಸಿಕೊಳ್ಳಿ (ಕೆಲವರಲ್ಲಿ ಗುಣಗಳೇ ಹಾಗೆ ಎಷ್ಟೇ ಬುದ್ದಿ ಹೇಳಿದ್ರು ಹೋಗಲ್ಲ. ಉದಾ: ನಾನು ಸಿಗರೆಟ್ ಸೇದುವ ಹಾಗೆ). ನೇರವಾಗಿ ಗುರುಗಳ ಬಳಿ ಬಂದವನೇ ಗುರುಗಳೇ, ನನ್ನ ಒಂದು ಸಂದೇಹವನ್ನ ಬಗೆ ಹರಿಸಿ ಅಂದನಂತೆ. ಗುರುಗಳು ಅದೇನು ಕೇಳು ಅಂದರಂತೆ. ಅದಕ್ಕವನು, "ಈ ಜಗತ್ತಿನಲ್ಲಿ ಎಲ್ಲವೂ ಮೊದಲೇ ನಿರ್ಧಾರ ಆಗಿರೋದಾದ್ರೆ ನಾವ್ಯಾಕೆ ಏನನ್ನಾದರು ಮಾಡಬೇಕು? ಆಗೋದು ಹೇಗಿದ್ರು ಆಗ್ತದಲ್ವ? ಅದಕ್ಕೆ ನಾನು ಇನ್ಮೇಲೆ ಏನನ್ನು ಮಾಡುವುದಿಲ್ಲ" ಅಂದನಂತೆ. ಅದಕ್ಕೆ ಗುರುಗಳು ಶಾಂತಚಿತ್ತದಿಂದ ನಗುತ್ತ ಹೇಳಿದರಂತೆ "ದಡ್ಡ, ನಿನ್ನ ಪ್ರಶ್ನೆಯಲ್ಲೇ ಉತ್ತರವಿದೆಯಲ್ಲೋ?". ಅದಕ್ಕೆ ಶಿಷ್ಯ "ಅದ್ಹೇಗೆ ಗುರುಗಳೇ?" ಅಂತ ಮರುಪ್ರಶ್ನೆ ಹಾಕಿದನಂತೆ. ಆಗ ಗುರುಗಳು, "ಮಗೂ, ಈ ಜಗತ್ತಿನಲ್ಲಿ ಎಲ್ಲವೂ ಮೊದಲೇ ನಿಶ್ಚಯ ಆಗಿದೆ ಅಂದಮೇಲೆ, ನಾವು ಏನು ಮಾಡಬೇಕು ಅನ್ನೋದು ಸಹ ಮೊದಲೇ ನಿರ್ಧಾರ ಆಗಿರುತ್ತೆ ಅಲ್ವಾ? ಆಗುವುದು ಹೇಗಿದ್ದರೂ ಆಗುತ್ತದೆ ನಿಜ. ನೀನು ಏನೂ ಮಾಡದೆ ಇದ್ರೂ ಸಹ, ನೀನು ಏನು ಮಾಡಬೇಕು ಅನ್ನೋದು ಮೊದಲೇ ನಿರ್ಧಾರ ಆಗಿದೆ ಅದನ್ನ ನೀನು ಮಾಡಿಯೇ ತೀರುತ್ತಿಯ. ಸುಮ್ಮನೆ ಸಂದೇಹಗಳ ಸುಳಿಯಲ್ಲಿ ಸಿಲುಕಿ ತಲೆಕೆಡಿಸಿಕೊಳ್ಳುವುದರಿಂದ  ಏನೂ ಪ್ರಯೋಜನವಿಲ್ಲ. ಹೋಗು ನಿನ್ನಿಂದ ಅದೇನು ಆಗಬೇಕು ಅದನ್ನ ಮಾಡು ಅಂದರಂತೆ.

ನಿಜವಾಗಲು ಎಷ್ಟು ವಿಸ್ಮಯ ಅಲ್ವಾ? ಇಂತಹ ಸೂಕ್ಷ್ಮ ವಿಚಾರಗಳಿಗೆ ಇಷ್ಟು ಸುಲಭದ ಪರಿಹಾರ ಬಹುಶ ಕೇವಲ ಝೆನ್ ಗುರುಗಳಿಗೆ ಮಾತ್ರ ಸಿಗ್ತಿರಬೇಕು ಅನ್ಸೊಲ್ವಾ?


Friday, July 22, 2011

ಹಾಗೆ ಸುಮ್ಮನೆ....

ಸುಮಾರು ಒಂದೂವರೆ ವರ್ಷದಿಂದ ಪ್ರಯತ್ನ ಮಾಡ್ತಿದ್ದೆ. ಇದೇನಾ ಜೀವನ? ಯಾರಿಗ್ಬೇಕು ಈ ಜಂಜಾಟ? ದಿನ ಅದೇ ಕೆಲಸ, ಅದೇ ಮುಖಗಳು ಮತ್ತೆ ಅದೇ ನಾಟಕಗಳು. ಈ ಜೀವನ ಶೈಲಿ ಸಾಕು. ಯಾವುದೋ ಒಂದು ಕಡೆ ಹೋಗಿ ಯಾಂತ್ರಿಕ ಬದುಕಿಗೆ ತಿಲಾಂಜಲಿ ಇಟ್ಟು ಆರಾಮಾಗಿ ಇದ್ದು ಬಿಡೋಣ ಅನ್ಕೊತಿದ್ದೆ... ಆಗ ನೆನಪಾಗಿದ್ದೆ ಗೌತಮ ಬುದ್ಧ. ಆಗಿಂದ ಪ್ರತಿ ರಾತ್ರಿ ಮಲಗೋವಾಗ, ಏನಾದ್ರು ಆಗ್ಲಿ ನಾನು ಬುದ್ಧನ ತರ ಅರ್ಧ ರಾತ್ರಿಲಿ ಎದ್ದು ಓಡಿ ಹೋಗೋಣ ಅನ್ನಿಸ್ತಿತ್ತು.... ಆದ್ರೆ ಏನ್ ಮಾಡೋದು ಬಡ್ಡಿಮಗಂದು ಮಲ್ಕೊಂಡ ಮೇಲೆ ಅರ್ಧ ರಾತ್ರಿಲಿ ಎಚ್ಚರನೇ ಆಗಿರಲಿಲ್ಲ....

ಅದೇನೋ ಹೇಳಿದಹಾಗೆ, ಅಂತು ಇಂತೂ ಮೊನ್ನೆ ಒಂದು ದಿನ ಅರ್ಧ ರಾತ್ರಿಲಿ ಎಚ್ಚರ ಆಯಿತು. ಎದ್ದು ಹಾಸಿಗೆ ಮೇಲೆ ಕೂತ್ಕೊಂಡೆ. ಇನ್ನೇನು ಎದ್ದಿದ್ದು ಆಗಿದೆ ಇನ್ನು ಬುದ್ಧನ ಹಾಗೆ ಎಲ್ಲವನ್ನು ಬಿಟ್ಟು ಓಡಿ ಹೋಗೋದೇ ಅನ್ಕೊಂಡು ಸುತ್ತ ಒಂದುಸಲ ಕಣ್ಣಾಡಿಸಿದೆ... ಮನೆಯೆಲ್ಲ ಖಾಲಿ ಖಾಲಿ, ಇರೋದೇ ನಾನೊಬ್ಬ!. ಮಧ್ಯರಾತ್ರಿ ಚಳಿಯಾಗ್ತಿತ್ತು. ಛೆ! ಯಾರು ಇಲ್ಲವಲ್ಲ? ಇನ್ಯಾರನ್ನ ಬಿಟ್ಟೋಗೋದು?  ಅನ್ಕೊಂಡು ಬೆಂಕಿ ಕಡ್ಡಿ ಗೀರಿ ಸಿಗರೇಟ್ ಹಚ್ಚಿ ಒಂದೆರಡು ಧಂ ಎಳೆದು ಮೈ ತುಂಬಾ ಬೆಡ್ ಶೀಟ್ ಎಳ್ಕೊಂಡು ಪುನಃ ಮಲ್ಕೊಂಡೆ....

Tuesday, July 12, 2011

ಹಾಗೆ ಸುಮ್ಮನೆ....

ಬಹಳ ದಿನವಾಯ್ತು ಬ್ಲಾಗ್ ಗೆ ಬಂದು, ಏನನ್ನು ಬರೆಯಲಿಕ್ಕೆ ಆಗಿರಲಿಲ್ಲ. ತುಂಬಾ ವಿಷಯಗಳಿದ್ರೂ ಸಹ ಬರೆಯಲು ಕುಳಿತುಕೊಳ್ಳುವಷ್ಟು ವ್ಯವಧಾನ ಇರಲಿಲ್ಲ. ಆಫೀಸಲ್ಲಿ ತುಂಬಾ ಕೆಲಸ ಇತ್ತು. ಸರಿ ಈದಿನವಾದ್ರು ಏನಾದ್ರೂ ಬರೆಯೋಣ ಅನ್ಕೊಂಡು ಕುಳಿತುಕೊಂಡೆ. ಬರೆದದ್ದು ನಾನೇ ಅದ್ದರಿಂದ ಅಪ್ರಿಯವಾದರೆ ದಯವಿಟ್ಟು ಮನಸಿಗೆ ಹಾಕೊಳ್ಳಬೇಡಿ. ಇದಕ್ಕೆ ಶೀರ್ಷಿಕೆ ಏನಂತ ಇಡೋದು ಅಂತ ತಲೆ ಕೆರ್ಕೊಂಡು ಕುಳಿತಿರೋವಾಗ ಥಟ್ಟನೆ ನನ್ನ ಹಳೆಯ ಶೀರ್ಷಿಕೆ ನೆನಪಾಗಿ ಅದನ್ನೇ ಇಟ್ಟಿದ್ದೀನಿ. ದಯವಿಟ್ಟು ಇದನ್ನ ಬಿಟ್ರೆ ಬೇರೆ ಏನು ಗೊತ್ತಿಲ್ವ? ಅನ್ಕೋಬೇಡಿ. ಯಾಕಂದ್ರೆ ವಾಸ್ತವವಾಗಿ ವಿಷಯವೇ ಆ ರೀತಿ ಇದೆ.

ಅದೇನಾಯ್ತು ಅಂದ್ರೆ ನಿನ್ನೆ ರಾತ್ರಿ ಆಫೀಸ್ ಕೆಲಸ ಮುಗಿಸಿಕೊಂಡು ಮನೆ ಕಡೆ ಹೊರಟಿದ್ದೆ, ರಾತ್ರಿ ಊಟದ ಸಮಯ ಆಗಿತ್ತು(ಸಾಧಾರಣವಾಗಿ ನನಗೆ ಊಟಕ್ಕೆ ಅಂತ ಸಮಯ ಇರೋಲ್ಲ, ಆದರೂ ಅದೊಂದು ನಿಯಮ ಅಲ್ವೇ?). ಏನಾದ್ರೂ ಕಟ್ಟಿಸಿಕೊಳ್ಳೋಣ ಅನ್ಕೊಂಡು ಬರ್ತಿದ್ದೆ. ಬೆಂದಕಾಳುರೆಂಬ ಬೆಂಗಳೂರಲ್ಲಿ ಮೊದಲೇ ನಾನು ಏಕಾಂಗಿ ಸಂಚಾರಿ. ಬಹುಶಃ ಬೆಂಕಿಗೂ ನನಗೂ ಏನೋ ಒಂದು ರೀತಿಯಲ್ಲಿ ಆಗಿಬರೋಲ್ಲ. ಆದ್ದರಿಂದ ಮನೆಯಲ್ಲಿ ಓಲೆ ಹಚ್ಹ್ಹೊಲ್ಲ. ಆದ್ರೆ ಬೆಂಕಿ ಕಡ್ಡಿಯಿಂದ ಸಿಗರೇಟ್ ಹಚ್ಚೋದು ನನಗೇ ಬಹಳ ಸಲೀಸು.  ಅಯ್ಯೋ ಸುಮ್ನೆ ಏನೇನೋ ಹೇಳ್ತಿದ್ದೀನಿ. ವಿಷಯಕ್ಕೆ ಬರ್ತೀನಿ.

ಊಟದ ಸಮಯವಾದ್ದರಿಂದ ಏನು ತಗೋಳೋದು ಅನ್ನೋ ಯೋಚನೆಯಲ್ಲಿದ್ದೆ. ಆಗ ಮೈಸೂರ್ ನೆನಪಾಯ್ತು, ಇರಲಿ ಅಂತ ಒಂದೆರಡು ಪೀಸ್ ಮೈಸೂರ್ ಪಾಕ್ ತಗೊಂಡೆ. ಆಮೇಲೆ ಹಾಗೆ ಯೋಚನೆ ಮಾಡೋವಾಗ ನನ್ನವಳು ನೆನಪಾದಳು. ಸರಿ ಅನ್ಕೊಂಡು ಅವಳಿಷ್ಟದ ಮಸಾಲೆ ದೋಸೆ ಕಟ್ಟಿಸಿಕೊಂಡೆ. ಅದೇನು ಗ್ರಹಚಾರವೋ ಏನೋ? ಒಂದೇ ಸಲ ಅವಳ ಮನೆಯ ಎಲ್ಲರೂ ನೆನಪಾಗಿಬಿಡೋದಾ? ಮೊದಲಿಗೆ ಅವಳ ತಮ್ಮ, ಸರಿ ಒಂದು ಪ್ಲೇಟ್ ಪಾನಿ ಪುರಿ ಕಟ್ಟು ಅಂದೆ, ಆಮೇಲೆ ಅವಳಣ್ಣ, ಸರಿ ಒಂದು ಪ್ಲೇನ್ ದೋಸೆ, ಆಮೇಲೆ ಅವರಮ್ಮ? ಸರಿ ಪಕ್ಕದ ಹೋಟೆಲಿಗೆ ಹೋಗಿ ಒಂದು ತಲೆ ಮಾಂಸ. ಕೊನೆದಾಗಿ ಅವರಪ್ಪ ನೆನಪಾಗಿಬಿಡೋದ? ಸರಿ ಇನ್ನೇನು ಮಾಡೋದು? ನನಗೆ ಇನ್ನು ಬೇರೆ ತಿಂಡಿ ತಗೊಂಡ್ರೆ ತಿನ್ನೋಕಾಗೋಲ್ಲ ಅನ್ಕೊಂಡು ಅಲ್ಲೇ ಪಕ್ಕದಲ್ಲೇ ಇದ್ದ ಬಾರ್ ಗೆ ನುಗ್ಗಿದೆ. ಒಂದು ಕ್ವಾಟರ್ ವಿಸ್ಕಿ ಕೊಂಡೆ. ಅಮೆಲೆನಾಯ್ತು ಅಂತೀರಾ? ಇನ್ನೇನಾಗುತ್ತೆ? ಮನೆಗೋಗಿ ವಿಸ್ಕಿ ಕುಡಿದು, ಅರ್ಧಂಬರ್ದ ಊಟ ಮಾಡಿ ಹಾಸಿಗೆ ಮೇಲೆ ಉರುಳಿಕೊಂಡೆ.

Friday, March 11, 2011

ಹಾಗೆ ಸುಮ್ಮನೆ-೩

 ಇದ್ದಕ್ಕಿದ್ದ ಹಾಗೆ ಎಷ್ಟೊಂದು Depress ಆಗ್ತೀನಿ, ಕಾರಣವೇ ಇಲ್ಲದೆ Hurt ಆಗ್ತೀನಿ ಅಂದ್ರೆ ಅದೊಂದು ಕಷ್ಟ ಯಾತನೆ..! ಕೆಲವೊಮ್ಮೆ ಆ ನೋವು ನನಗೆ ಮಾತ್ರ ಇರಲಿ ಅನ್ನಿಸುತ್ತೆ. ಆದ್ರೆ Ego ನನ್ನ ಬಿಟ್ಟುಕೊಡೋಲ್ಲ. ನಾನೊಬ್ಬನೇ ಮಾತ್ರ ಯಾಕೆ ಯಾತನೆ ಅನುಭವಿಸಬೇಕು? ಅವಳಿಗೂ ಸ್ವಲ್ಪ ಕಾಟ ಕೊಡೋಣ ಅನ್ನಿಸುತ್ತೆ! ಕೆಲವೊಮ್ಮೆ ಅವಳಿಗೆ ಏನನ್ನೋ ಹೇಳೋಣ ಅಂದುಕೊಂಡರೂ, ಹೇಳಿಕೊಳ್ಳೋಕೆ ಆಗಿಲ್ಲ. ಅದನ್ನ ನೆನೆಸಿಕೊಂಡು ನನ್ನವಳಿಗೆ 'ನೋಡೇ! ನಾನು ಹೀಗೆ. ಇದೆ ನನ್ನ ಆಸೆ' ಅಂತ   ತೋರಿಸಿಕೊಡೋಣ  ಅಂದುಕೊಂಡರೂ, ಅವಳಿಗೆ 'ತಿಳಿಸೋದು ಹೇಗೆ?'  ಅನ್ನೋದೇ Million Dollar ಪ್ರಶ್ನೆ..
 ನನ್ನವಳು ಬದುಕಿನ ಬಗ್ಗೆ, ಅವಳ ಕನಸುಗಳ ಬಗ್ಗೆ ಹೇಳಿಕೊಂಡಾಗ ನನ್ನಲ್ಲಿ ಕೆಲ ಉಡಾಫೆ ಭಾವನೆಗಳು ಮನೆ ಮಾಡಿತ್ತು. ಹೌದು, ನಾನು ಒಂಥರಾ ಉಡಾಫೆ ಸ್ವಭಾವದವನೇ? ಆದ್ರೆ  ಅದೇ ತರಹದ ಆಸೆಗಳು ನನಗೂ ಬಂದಾಗ 'ಹೌದು! ಅವಳು ಹೇಳುತ್ತಿದ್ದಿದ್ದು ಇದೆ' ಅನ್ನೋದು ನನಗೆ ನಿಧಾನವಾಗಿ ಅರ್ಥವಾಗತೊಡಗಿತ್ತು. ಆಗಲೇ ನನಗೆ ಗೊತ್ತಾಗಿದ್ದು ನಮ್ಮಿಬ್ಬರದ್ದೂ ಒಂದೇ ಆಸೆ ಅಂತ. ಆ ಕನಸುಗಳು ನಿಜವಾಗುತ್ತ? ಅನ್ನೋದೇ ಒಂದು ದೊಡ್ಡ ಕನಸು....
 ಈಗಲೂ ಕೂಡ ಅಷ್ಟೇ ನನ್ನವಳಿಗೆ ಅವಕಾಶ ಸಿಕ್ಕಾಗೆಲ್ಲ ತುಂಬಾ ಕಾಲೆಳಿತೀನಿ. ಮೌನವಾಗಿದ್ದು ಸಾಕು, ಏನಾದ್ರು ಮಾತಾಡು ಅಂತ ಪದೇ ಪದೇ ಅಂತೀನಿ. ಆದ್ರೆ ಅವಳು ಅದ್ಯಾವ ದೊಡ್ಡ ಶಪಥ ಮಾಡಿದ್ದಾಳೋ ಗೊತ್ತಿಲ್ಲ. ಏನೊಂದು ಗೊತ್ತಿಲ್ಲದೇ ಇರುವ ಹಾಗೆ ಮುಗುಮ್ಮಾಗಿರ್ತಾಳೆ. ಏನಾದ್ರೂ ಕೇಳಿದ್ರೆ ಅದಕ್ಕೆಲ್ಲ ಒಂದೇ ಪದದಲ್ಲಿ ಉತ್ತರ ಕೊಡ್ತಾಳೆ. ಅವಳು ನಾನು ಮುಖಾಮುಖಿ ಅದಾಗಲೆಲ್ಲ ಅವಳು ನನ್ನ ನೋಡ್ತಾಳೆ, ನಾನು ಅವಳನ್ನ ನೋಡ್ತೀನಿ ಅಷ್ಟೇ. ನಮ್ಮಿಬ್ಬರ ಕಣ್ಣುಗಳು ಮಾತ್ರ ತುಂಬಾನೆ ಮಾತನಾಡಿಕೊಳ್ಳುತ್ತವೆ ಆದ್ರೆ ಅವಕ್ಕೆ ಶಬ್ದ ರೂಪ ಕೊಡೋಕೆ ಆಗದೆ ಇರೋದೇ ಮತ್ತೊಂದು ಬೇಸರದ ಸಂಗತಿ. ಮನಸಲ್ಲಿರೋ ಭಾವನೆಗಳು ಕೇವಲ ಬರಿಯ ಆಸೆಗಳಾಗಿಯೇ ಉಳಿದುಕೊಂಡಿವೆ. ನಿಜವಾಗಲು ಆ ಆಸೆಗಳು, ಕನಸುಗಳು ನನಸಾಗುತ್ತ? ಅನ್ನೋದೇ ಯಕ್ಷ ಪ್ರಶ್ನೆ. ಒಂದು ವೇಳೆ ಹಾಗೇನಾದ್ರೂ ಇದ್ದಲ್ಲಿ ಅದಕ್ಕೆ ಅವಳೇ ಉತ್ತರಿಸಬೇಕು...