Saturday, October 15, 2011

ಹಾಗೆ ಸುಮ್ಮನೆ...

ನಮ್ಮ ಮನಸಿನ ನಡವಳಿಕೆ ತೀರಾ ವಿಚಿತ್ರ ಅಲ್ವ? ಮಂಗನಿಂದ ಮಾನವ ಅಂತಾರೆ ಮನುಷ್ಯ ಬದಲಾಗಿದ್ರು ಸಹ ಮನಸ್ಸಿನಿಂದ ಇನ್ನು ಮಂಗನ ಬುದ್ದಿ ಹೋಗಿಲ್ಲ ಅನ್ಸುತ್ತೆ. ಬೇರೆಯವರ ಮನಸಿನ ಬಗ್ಗೆ ನನಗಷ್ಟು ಗೊತ್ತಿಲ್ಲ. ಆದ್ರೆ ನನ್ ಮನಸ್ಸಂತೂ ಇನ್ನು ಮಂಗನ ಬುದ್ದಿ ಕಳಕೊಂಡಿಲ್ಲ. ಯಾಕೇಳ್ತೀನಿ ಅಂದ್ರೆ, ಮುಂಚೆ ಎಲ್ಲ ಏನಾದ್ರೂ ಬರೆಯೋ ಉತ್ಸಾಹ ತುಂಬಾ ಇರ್ತಿತ್ತು, ಆದ್ರೆ ಬರೆಯೋಕೆ ಪುರುಷೋತ್ತು ಸಿಕ್ತಿರಲಿಲ್ಲ. ಈಗ ಕಳೆದೊಂದು ತಿಂಗಳಿಂದ ನನಗೆ ಬಿಡುವೋ ಬಿಡುವು, ಆದ್ರೆ ಏನಾದ್ರೂ ಬರೆಯೋ ಮನಸಿಲ್ಲ. ಇದಕ್ಕೆ ಇರಬೇಕು ಜನ ಹೇಳೋದು "ಹಲ್ಲಿದ್ದಾಗ ಕಡಲೆ ಸಿಗೋಲ್ಲ, ಕಡಲೆ ಸಿಕ್ಕಾಗ ಹಲ್ಲೆ ಇರೋಲ್ಲ (ಮಾರ್ಪಾಡಾಗಿದೆ ಕ್ಷಮಿಸಿ)" ಅಂತ.

ಇರಲಿ, ಆದರೂ ಏನಾದ್ರೂ ಬರೆಯಬೇಕು ಅನ್ಕೊಂಡೆ ಯಾಕಂದ್ರೆ ನನಗೆ ಬಿಡುವು ಇನ್ನೊಂದೇ ದಿನ ಅಷ್ಟೇ. ಏನು ಬರೆಯೋಣ ಅಂತ ಯೋಚಿಸುತ್ತಿರಬೇಕಾದರೆ ಹೊಸದೇನು ಹೊಳೆಯಲಿಲ್ಲ, ಹಾಗಾಗಿ ಎಂದೋ ಓದಿದ್ದ ಒಂದು ಹಳೆಯ ಝೆನ್ ಕಥೆನೇ  ಬರೆದು ಬಿಡೋಣ ಅನ್ನಿಸಿ ಅದನ್ನೇ ಬರೀತಿದೀನಿ. ಚಿಕ್ಕದಾಗಿದ್ರು ಚೆನ್ನಾಗಿದೆ. ನನಗೆ ಹಿಡಿಸ್ತು, ನಿಮಗೂ ಹಿಡಿಸಬೇಕು ಅಂತೇನಿಲ್ಲ! ಯಾಕಂದ್ರೆ ನಾನು ಬರಿತಿರೋದು ಹಾಗೆ ಸುಮ್ಮನೆ!

ಒಂದಾನೊಂದು ಕಾಲದಲ್ಲಿ (ನಿರ್ದಿಷ್ಟವಾಗಿ ಅದು ಯಾವ ಕಾಲ ಅಂತ ದೇವರಾಣೆಗೂ ನಂಗೊತ್ತಿಲ್ಲ) ಯಥಾ ಪ್ರಕಾರ ಒಬ್ಬ ಝೆನ್ ಗುರುಗಳಿದ್ರು. ಗುರುಗಳು ಅಂದಮೇಲೆ ನಿಮಗೆ ಗೊತ್ತಲ್ಲ? ಗುರುಕುಲ, ಶಿಷ್ಯವೃಂದ ಎಲ್ಲವೂ ಇರುತ್ತೆ. ತಥಾ ಪ್ರಕಾರ ಅಲ್ಲೂ ಇತ್ತು. ಆ ಗುರುಗಳು ತಮ್ಮೆಲ್ಲ ಶಿಷ್ಯರಿಗೆ ಬೋಧನೆ ಮಾಡುತ್ತಾ ಎಲ್ಲರನ್ನು ಸನ್ಮಾರ್ಗದಲ್ಲಿ ನಡೆಸುವ ಕಾರ್ಯದಲ್ಲಿದ್ರು. ಅವರ ಶಿಷ್ಯಕೋಟಿಯಲ್ಲಿ ಒಬ್ಬ ಶಿಷ್ಯ ಇದ್ದ. ಮೊಂಡ ಅಂತಾನೆ ಭಾವಿಸಿಕೊಳ್ಳಿ (ಕೆಲವರಲ್ಲಿ ಗುಣಗಳೇ ಹಾಗೆ ಎಷ್ಟೇ ಬುದ್ದಿ ಹೇಳಿದ್ರು ಹೋಗಲ್ಲ. ಉದಾ: ನಾನು ಸಿಗರೆಟ್ ಸೇದುವ ಹಾಗೆ). ನೇರವಾಗಿ ಗುರುಗಳ ಬಳಿ ಬಂದವನೇ ಗುರುಗಳೇ, ನನ್ನ ಒಂದು ಸಂದೇಹವನ್ನ ಬಗೆ ಹರಿಸಿ ಅಂದನಂತೆ. ಗುರುಗಳು ಅದೇನು ಕೇಳು ಅಂದರಂತೆ. ಅದಕ್ಕವನು, "ಈ ಜಗತ್ತಿನಲ್ಲಿ ಎಲ್ಲವೂ ಮೊದಲೇ ನಿರ್ಧಾರ ಆಗಿರೋದಾದ್ರೆ ನಾವ್ಯಾಕೆ ಏನನ್ನಾದರು ಮಾಡಬೇಕು? ಆಗೋದು ಹೇಗಿದ್ರು ಆಗ್ತದಲ್ವ? ಅದಕ್ಕೆ ನಾನು ಇನ್ಮೇಲೆ ಏನನ್ನು ಮಾಡುವುದಿಲ್ಲ" ಅಂದನಂತೆ. ಅದಕ್ಕೆ ಗುರುಗಳು ಶಾಂತಚಿತ್ತದಿಂದ ನಗುತ್ತ ಹೇಳಿದರಂತೆ "ದಡ್ಡ, ನಿನ್ನ ಪ್ರಶ್ನೆಯಲ್ಲೇ ಉತ್ತರವಿದೆಯಲ್ಲೋ?". ಅದಕ್ಕೆ ಶಿಷ್ಯ "ಅದ್ಹೇಗೆ ಗುರುಗಳೇ?" ಅಂತ ಮರುಪ್ರಶ್ನೆ ಹಾಕಿದನಂತೆ. ಆಗ ಗುರುಗಳು, "ಮಗೂ, ಈ ಜಗತ್ತಿನಲ್ಲಿ ಎಲ್ಲವೂ ಮೊದಲೇ ನಿಶ್ಚಯ ಆಗಿದೆ ಅಂದಮೇಲೆ, ನಾವು ಏನು ಮಾಡಬೇಕು ಅನ್ನೋದು ಸಹ ಮೊದಲೇ ನಿರ್ಧಾರ ಆಗಿರುತ್ತೆ ಅಲ್ವಾ? ಆಗುವುದು ಹೇಗಿದ್ದರೂ ಆಗುತ್ತದೆ ನಿಜ. ನೀನು ಏನೂ ಮಾಡದೆ ಇದ್ರೂ ಸಹ, ನೀನು ಏನು ಮಾಡಬೇಕು ಅನ್ನೋದು ಮೊದಲೇ ನಿರ್ಧಾರ ಆಗಿದೆ ಅದನ್ನ ನೀನು ಮಾಡಿಯೇ ತೀರುತ್ತಿಯ. ಸುಮ್ಮನೆ ಸಂದೇಹಗಳ ಸುಳಿಯಲ್ಲಿ ಸಿಲುಕಿ ತಲೆಕೆಡಿಸಿಕೊಳ್ಳುವುದರಿಂದ  ಏನೂ ಪ್ರಯೋಜನವಿಲ್ಲ. ಹೋಗು ನಿನ್ನಿಂದ ಅದೇನು ಆಗಬೇಕು ಅದನ್ನ ಮಾಡು ಅಂದರಂತೆ.

ನಿಜವಾಗಲು ಎಷ್ಟು ವಿಸ್ಮಯ ಅಲ್ವಾ? ಇಂತಹ ಸೂಕ್ಷ್ಮ ವಿಚಾರಗಳಿಗೆ ಇಷ್ಟು ಸುಲಭದ ಪರಿಹಾರ ಬಹುಶ ಕೇವಲ ಝೆನ್ ಗುರುಗಳಿಗೆ ಮಾತ್ರ ಸಿಗ್ತಿರಬೇಕು ಅನ್ಸೊಲ್ವಾ?


Friday, July 22, 2011

ಹಾಗೆ ಸುಮ್ಮನೆ....

ಸುಮಾರು ಒಂದೂವರೆ ವರ್ಷದಿಂದ ಪ್ರಯತ್ನ ಮಾಡ್ತಿದ್ದೆ. ಇದೇನಾ ಜೀವನ? ಯಾರಿಗ್ಬೇಕು ಈ ಜಂಜಾಟ? ದಿನ ಅದೇ ಕೆಲಸ, ಅದೇ ಮುಖಗಳು ಮತ್ತೆ ಅದೇ ನಾಟಕಗಳು. ಈ ಜೀವನ ಶೈಲಿ ಸಾಕು. ಯಾವುದೋ ಒಂದು ಕಡೆ ಹೋಗಿ ಯಾಂತ್ರಿಕ ಬದುಕಿಗೆ ತಿಲಾಂಜಲಿ ಇಟ್ಟು ಆರಾಮಾಗಿ ಇದ್ದು ಬಿಡೋಣ ಅನ್ಕೊತಿದ್ದೆ... ಆಗ ನೆನಪಾಗಿದ್ದೆ ಗೌತಮ ಬುದ್ಧ. ಆಗಿಂದ ಪ್ರತಿ ರಾತ್ರಿ ಮಲಗೋವಾಗ, ಏನಾದ್ರು ಆಗ್ಲಿ ನಾನು ಬುದ್ಧನ ತರ ಅರ್ಧ ರಾತ್ರಿಲಿ ಎದ್ದು ಓಡಿ ಹೋಗೋಣ ಅನ್ನಿಸ್ತಿತ್ತು.... ಆದ್ರೆ ಏನ್ ಮಾಡೋದು ಬಡ್ಡಿಮಗಂದು ಮಲ್ಕೊಂಡ ಮೇಲೆ ಅರ್ಧ ರಾತ್ರಿಲಿ ಎಚ್ಚರನೇ ಆಗಿರಲಿಲ್ಲ....

ಅದೇನೋ ಹೇಳಿದಹಾಗೆ, ಅಂತು ಇಂತೂ ಮೊನ್ನೆ ಒಂದು ದಿನ ಅರ್ಧ ರಾತ್ರಿಲಿ ಎಚ್ಚರ ಆಯಿತು. ಎದ್ದು ಹಾಸಿಗೆ ಮೇಲೆ ಕೂತ್ಕೊಂಡೆ. ಇನ್ನೇನು ಎದ್ದಿದ್ದು ಆಗಿದೆ ಇನ್ನು ಬುದ್ಧನ ಹಾಗೆ ಎಲ್ಲವನ್ನು ಬಿಟ್ಟು ಓಡಿ ಹೋಗೋದೇ ಅನ್ಕೊಂಡು ಸುತ್ತ ಒಂದುಸಲ ಕಣ್ಣಾಡಿಸಿದೆ... ಮನೆಯೆಲ್ಲ ಖಾಲಿ ಖಾಲಿ, ಇರೋದೇ ನಾನೊಬ್ಬ!. ಮಧ್ಯರಾತ್ರಿ ಚಳಿಯಾಗ್ತಿತ್ತು. ಛೆ! ಯಾರು ಇಲ್ಲವಲ್ಲ? ಇನ್ಯಾರನ್ನ ಬಿಟ್ಟೋಗೋದು?  ಅನ್ಕೊಂಡು ಬೆಂಕಿ ಕಡ್ಡಿ ಗೀರಿ ಸಿಗರೇಟ್ ಹಚ್ಚಿ ಒಂದೆರಡು ಧಂ ಎಳೆದು ಮೈ ತುಂಬಾ ಬೆಡ್ ಶೀಟ್ ಎಳ್ಕೊಂಡು ಪುನಃ ಮಲ್ಕೊಂಡೆ....

Tuesday, July 12, 2011

ಹಾಗೆ ಸುಮ್ಮನೆ....

ಬಹಳ ದಿನವಾಯ್ತು ಬ್ಲಾಗ್ ಗೆ ಬಂದು, ಏನನ್ನು ಬರೆಯಲಿಕ್ಕೆ ಆಗಿರಲಿಲ್ಲ. ತುಂಬಾ ವಿಷಯಗಳಿದ್ರೂ ಸಹ ಬರೆಯಲು ಕುಳಿತುಕೊಳ್ಳುವಷ್ಟು ವ್ಯವಧಾನ ಇರಲಿಲ್ಲ. ಆಫೀಸಲ್ಲಿ ತುಂಬಾ ಕೆಲಸ ಇತ್ತು. ಸರಿ ಈದಿನವಾದ್ರು ಏನಾದ್ರೂ ಬರೆಯೋಣ ಅನ್ಕೊಂಡು ಕುಳಿತುಕೊಂಡೆ. ಬರೆದದ್ದು ನಾನೇ ಅದ್ದರಿಂದ ಅಪ್ರಿಯವಾದರೆ ದಯವಿಟ್ಟು ಮನಸಿಗೆ ಹಾಕೊಳ್ಳಬೇಡಿ. ಇದಕ್ಕೆ ಶೀರ್ಷಿಕೆ ಏನಂತ ಇಡೋದು ಅಂತ ತಲೆ ಕೆರ್ಕೊಂಡು ಕುಳಿತಿರೋವಾಗ ಥಟ್ಟನೆ ನನ್ನ ಹಳೆಯ ಶೀರ್ಷಿಕೆ ನೆನಪಾಗಿ ಅದನ್ನೇ ಇಟ್ಟಿದ್ದೀನಿ. ದಯವಿಟ್ಟು ಇದನ್ನ ಬಿಟ್ರೆ ಬೇರೆ ಏನು ಗೊತ್ತಿಲ್ವ? ಅನ್ಕೋಬೇಡಿ. ಯಾಕಂದ್ರೆ ವಾಸ್ತವವಾಗಿ ವಿಷಯವೇ ಆ ರೀತಿ ಇದೆ.

ಅದೇನಾಯ್ತು ಅಂದ್ರೆ ನಿನ್ನೆ ರಾತ್ರಿ ಆಫೀಸ್ ಕೆಲಸ ಮುಗಿಸಿಕೊಂಡು ಮನೆ ಕಡೆ ಹೊರಟಿದ್ದೆ, ರಾತ್ರಿ ಊಟದ ಸಮಯ ಆಗಿತ್ತು(ಸಾಧಾರಣವಾಗಿ ನನಗೆ ಊಟಕ್ಕೆ ಅಂತ ಸಮಯ ಇರೋಲ್ಲ, ಆದರೂ ಅದೊಂದು ನಿಯಮ ಅಲ್ವೇ?). ಏನಾದ್ರೂ ಕಟ್ಟಿಸಿಕೊಳ್ಳೋಣ ಅನ್ಕೊಂಡು ಬರ್ತಿದ್ದೆ. ಬೆಂದಕಾಳುರೆಂಬ ಬೆಂಗಳೂರಲ್ಲಿ ಮೊದಲೇ ನಾನು ಏಕಾಂಗಿ ಸಂಚಾರಿ. ಬಹುಶಃ ಬೆಂಕಿಗೂ ನನಗೂ ಏನೋ ಒಂದು ರೀತಿಯಲ್ಲಿ ಆಗಿಬರೋಲ್ಲ. ಆದ್ದರಿಂದ ಮನೆಯಲ್ಲಿ ಓಲೆ ಹಚ್ಹ್ಹೊಲ್ಲ. ಆದ್ರೆ ಬೆಂಕಿ ಕಡ್ಡಿಯಿಂದ ಸಿಗರೇಟ್ ಹಚ್ಚೋದು ನನಗೇ ಬಹಳ ಸಲೀಸು.  ಅಯ್ಯೋ ಸುಮ್ನೆ ಏನೇನೋ ಹೇಳ್ತಿದ್ದೀನಿ. ವಿಷಯಕ್ಕೆ ಬರ್ತೀನಿ.

ಊಟದ ಸಮಯವಾದ್ದರಿಂದ ಏನು ತಗೋಳೋದು ಅನ್ನೋ ಯೋಚನೆಯಲ್ಲಿದ್ದೆ. ಆಗ ಮೈಸೂರ್ ನೆನಪಾಯ್ತು, ಇರಲಿ ಅಂತ ಒಂದೆರಡು ಪೀಸ್ ಮೈಸೂರ್ ಪಾಕ್ ತಗೊಂಡೆ. ಆಮೇಲೆ ಹಾಗೆ ಯೋಚನೆ ಮಾಡೋವಾಗ ನನ್ನವಳು ನೆನಪಾದಳು. ಸರಿ ಅನ್ಕೊಂಡು ಅವಳಿಷ್ಟದ ಮಸಾಲೆ ದೋಸೆ ಕಟ್ಟಿಸಿಕೊಂಡೆ. ಅದೇನು ಗ್ರಹಚಾರವೋ ಏನೋ? ಒಂದೇ ಸಲ ಅವಳ ಮನೆಯ ಎಲ್ಲರೂ ನೆನಪಾಗಿಬಿಡೋದಾ? ಮೊದಲಿಗೆ ಅವಳ ತಮ್ಮ, ಸರಿ ಒಂದು ಪ್ಲೇಟ್ ಪಾನಿ ಪುರಿ ಕಟ್ಟು ಅಂದೆ, ಆಮೇಲೆ ಅವಳಣ್ಣ, ಸರಿ ಒಂದು ಪ್ಲೇನ್ ದೋಸೆ, ಆಮೇಲೆ ಅವರಮ್ಮ? ಸರಿ ಪಕ್ಕದ ಹೋಟೆಲಿಗೆ ಹೋಗಿ ಒಂದು ತಲೆ ಮಾಂಸ. ಕೊನೆದಾಗಿ ಅವರಪ್ಪ ನೆನಪಾಗಿಬಿಡೋದ? ಸರಿ ಇನ್ನೇನು ಮಾಡೋದು? ನನಗೆ ಇನ್ನು ಬೇರೆ ತಿಂಡಿ ತಗೊಂಡ್ರೆ ತಿನ್ನೋಕಾಗೋಲ್ಲ ಅನ್ಕೊಂಡು ಅಲ್ಲೇ ಪಕ್ಕದಲ್ಲೇ ಇದ್ದ ಬಾರ್ ಗೆ ನುಗ್ಗಿದೆ. ಒಂದು ಕ್ವಾಟರ್ ವಿಸ್ಕಿ ಕೊಂಡೆ. ಅಮೆಲೆನಾಯ್ತು ಅಂತೀರಾ? ಇನ್ನೇನಾಗುತ್ತೆ? ಮನೆಗೋಗಿ ವಿಸ್ಕಿ ಕುಡಿದು, ಅರ್ಧಂಬರ್ದ ಊಟ ಮಾಡಿ ಹಾಸಿಗೆ ಮೇಲೆ ಉರುಳಿಕೊಂಡೆ.

Friday, March 11, 2011

ಹಾಗೆ ಸುಮ್ಮನೆ-೩

 ಇದ್ದಕ್ಕಿದ್ದ ಹಾಗೆ ಎಷ್ಟೊಂದು Depress ಆಗ್ತೀನಿ, ಕಾರಣವೇ ಇಲ್ಲದೆ Hurt ಆಗ್ತೀನಿ ಅಂದ್ರೆ ಅದೊಂದು ಕಷ್ಟ ಯಾತನೆ..! ಕೆಲವೊಮ್ಮೆ ಆ ನೋವು ನನಗೆ ಮಾತ್ರ ಇರಲಿ ಅನ್ನಿಸುತ್ತೆ. ಆದ್ರೆ Ego ನನ್ನ ಬಿಟ್ಟುಕೊಡೋಲ್ಲ. ನಾನೊಬ್ಬನೇ ಮಾತ್ರ ಯಾಕೆ ಯಾತನೆ ಅನುಭವಿಸಬೇಕು? ಅವಳಿಗೂ ಸ್ವಲ್ಪ ಕಾಟ ಕೊಡೋಣ ಅನ್ನಿಸುತ್ತೆ! ಕೆಲವೊಮ್ಮೆ ಅವಳಿಗೆ ಏನನ್ನೋ ಹೇಳೋಣ ಅಂದುಕೊಂಡರೂ, ಹೇಳಿಕೊಳ್ಳೋಕೆ ಆಗಿಲ್ಲ. ಅದನ್ನ ನೆನೆಸಿಕೊಂಡು ನನ್ನವಳಿಗೆ 'ನೋಡೇ! ನಾನು ಹೀಗೆ. ಇದೆ ನನ್ನ ಆಸೆ' ಅಂತ   ತೋರಿಸಿಕೊಡೋಣ  ಅಂದುಕೊಂಡರೂ, ಅವಳಿಗೆ 'ತಿಳಿಸೋದು ಹೇಗೆ?'  ಅನ್ನೋದೇ Million Dollar ಪ್ರಶ್ನೆ..
 ನನ್ನವಳು ಬದುಕಿನ ಬಗ್ಗೆ, ಅವಳ ಕನಸುಗಳ ಬಗ್ಗೆ ಹೇಳಿಕೊಂಡಾಗ ನನ್ನಲ್ಲಿ ಕೆಲ ಉಡಾಫೆ ಭಾವನೆಗಳು ಮನೆ ಮಾಡಿತ್ತು. ಹೌದು, ನಾನು ಒಂಥರಾ ಉಡಾಫೆ ಸ್ವಭಾವದವನೇ? ಆದ್ರೆ  ಅದೇ ತರಹದ ಆಸೆಗಳು ನನಗೂ ಬಂದಾಗ 'ಹೌದು! ಅವಳು ಹೇಳುತ್ತಿದ್ದಿದ್ದು ಇದೆ' ಅನ್ನೋದು ನನಗೆ ನಿಧಾನವಾಗಿ ಅರ್ಥವಾಗತೊಡಗಿತ್ತು. ಆಗಲೇ ನನಗೆ ಗೊತ್ತಾಗಿದ್ದು ನಮ್ಮಿಬ್ಬರದ್ದೂ ಒಂದೇ ಆಸೆ ಅಂತ. ಆ ಕನಸುಗಳು ನಿಜವಾಗುತ್ತ? ಅನ್ನೋದೇ ಒಂದು ದೊಡ್ಡ ಕನಸು....
 ಈಗಲೂ ಕೂಡ ಅಷ್ಟೇ ನನ್ನವಳಿಗೆ ಅವಕಾಶ ಸಿಕ್ಕಾಗೆಲ್ಲ ತುಂಬಾ ಕಾಲೆಳಿತೀನಿ. ಮೌನವಾಗಿದ್ದು ಸಾಕು, ಏನಾದ್ರು ಮಾತಾಡು ಅಂತ ಪದೇ ಪದೇ ಅಂತೀನಿ. ಆದ್ರೆ ಅವಳು ಅದ್ಯಾವ ದೊಡ್ಡ ಶಪಥ ಮಾಡಿದ್ದಾಳೋ ಗೊತ್ತಿಲ್ಲ. ಏನೊಂದು ಗೊತ್ತಿಲ್ಲದೇ ಇರುವ ಹಾಗೆ ಮುಗುಮ್ಮಾಗಿರ್ತಾಳೆ. ಏನಾದ್ರೂ ಕೇಳಿದ್ರೆ ಅದಕ್ಕೆಲ್ಲ ಒಂದೇ ಪದದಲ್ಲಿ ಉತ್ತರ ಕೊಡ್ತಾಳೆ. ಅವಳು ನಾನು ಮುಖಾಮುಖಿ ಅದಾಗಲೆಲ್ಲ ಅವಳು ನನ್ನ ನೋಡ್ತಾಳೆ, ನಾನು ಅವಳನ್ನ ನೋಡ್ತೀನಿ ಅಷ್ಟೇ. ನಮ್ಮಿಬ್ಬರ ಕಣ್ಣುಗಳು ಮಾತ್ರ ತುಂಬಾನೆ ಮಾತನಾಡಿಕೊಳ್ಳುತ್ತವೆ ಆದ್ರೆ ಅವಕ್ಕೆ ಶಬ್ದ ರೂಪ ಕೊಡೋಕೆ ಆಗದೆ ಇರೋದೇ ಮತ್ತೊಂದು ಬೇಸರದ ಸಂಗತಿ. ಮನಸಲ್ಲಿರೋ ಭಾವನೆಗಳು ಕೇವಲ ಬರಿಯ ಆಸೆಗಳಾಗಿಯೇ ಉಳಿದುಕೊಂಡಿವೆ. ನಿಜವಾಗಲು ಆ ಆಸೆಗಳು, ಕನಸುಗಳು ನನಸಾಗುತ್ತ? ಅನ್ನೋದೇ ಯಕ್ಷ ಪ್ರಶ್ನೆ. ಒಂದು ವೇಳೆ ಹಾಗೇನಾದ್ರೂ ಇದ್ದಲ್ಲಿ ಅದಕ್ಕೆ ಅವಳೇ ಉತ್ತರಿಸಬೇಕು...

Sunday, November 7, 2010

ಮೋಹ-ಮಾಯೆ

"Put your hand on a hot stove for a minute, and it seems like an hour. Sit with a pretty girl for an hour, and it seems like a minute. That's relativity." 
 -- Albert Einstein
ಎಂಥಾ ಅದ್ಬುತವಾದ ಮಾತು ಅಲ್ವಾ? ಸಮಯ ಕಳೆಯಲು ಯಾವುದೋ ಒಂದು ಹಳೆಯ ವಾರಪತ್ರಿಕೆ ಕಣ್ಣಾಡಿಸುತ್ತಿದ್ದೆ. ಪುಸ್ತಕದ ಮಧ್ಯಭಾಗದ ಒಂದು ಮೂಲೆಯಲ್ಲಿ ಬರೆದಿತ್ತು. ಅಂತ ಮಹಾನ್ ವಿಜ್ಞಾನಿಗೆ ಅದರ ಅನುಭವ ಆಗಲೇ ಆಗಿದೆ ಅಂದ್ರೆ ನೀವೇ ಊಹೆ ಮಾಡಿ, ಪ್ರೀತಿ ಮತ್ತು ಅದರ ಆಳವನ್ನ. ಈ ಹುಡುಗ-ಹುಡುಗಿಯರ ಸಂಬಂಧಗಳೇ ಹೀಗೆ, ಎಷ್ಟು ಮಾತಾಡಿದ್ರು, ಎಷ್ಟು ನೋಡಿದರೂ ಸಮಾಧಾನ ಆಗೋಲ್ಲ.  ಅವಳು/ಅವನು ಯಾವಾಗಲೂ ನನ್ನ ಜೊತೆಯಲ್ಲೇ ಇರಬೇಕು ಅನ್ನಿಸಿಬಿಡುತ್ತೆ. ನನಗನ್ನಿಸುತ್ತೆ, ಮೋಹಕ್ಕೆ ಒಳಗಾದ ಯಾರನ್ನೂ ಬಿಟ್ಟಿಲ್ಲ ಈ ಪ್ರೀತಿ ಅನ್ನೋ ಮಾಯೆ ಅಂತ. ನೀವೇನಂತೀರಿ?

Friday, November 5, 2010

ಶುಭಾಶಯಗಳು

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.... ಈ ಬೆಳಕಿನ ಹಬ್ಬ ಎಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ನೆಮ್ಮದಿ ತರಲಿ ಅಂತ ಹಾರೈಸ್ತೀನಿ..

Friday, October 29, 2010

ನನ್ನುಸಿರು ನೀ..

ಒಂದು ಕ್ಷಣ ಪ್ರಪಂಚದಲ್ಲಿ ಹುಡ್ಗೀರ ಸಂಖ್ಯೆ ಕಡಿಮೆಯೇನು ಇಲ್ಲ ಅನಿಸಿದರೂ, ಮರುಕ್ಷಣವೇ ಅವಳೊಬ್ಬಳೇ ನನ್ನ ಪ್ರಪಂಚ ಅನ್ನಿಸಿಬಿಡುತ್ತೆ.... ಎಂಥಾ ವಿಚಿತ್ರ ಮಾಯೆ ಅಲ್ವಾ! ಈ ಪ್ರೀತಿ?
ನನ್ನ ಜೀವನದಲ್ಲಿ ಕೆಲವೇ ದಿನ ಜೊತೆ ಇದ್ದು, ಕೊನೆವರೆಗೂ ಮರೆಯಲಾಗದಷ್ಟು ಪ್ರೀತಿ, ಪ್ರೀತಿಯ ನೆನಪು ಮತ್ತು ಹಿತವಾದ ನೋವನ್ನು ಕೊಟ್ಟವಳನ್ನು ಮರೆತೇನೆಂದರು ನಾ ಮರೆಯಲಿ ಹ್ಯಾಂಗ?
ಅವಳು ನನ್ ಜೊತೆ ಇಲ್ಲ ಅಂತ ನಾನೇನು ಊಟ ಬಿಟ್ಟಿಲ್ಲ, ನಿದ್ದೆ ಬಿಟ್ಟಿಲ್ಲ, ಕೆಲಸ ಬಿಟ್ಟಿಲ್ಲ, ಬೇರೆಯವರ ಜೊತೆ ಮಾತಾಡೋದು ಬಿಟ್ಟಿಲ್ಲ. ಅಷ್ಟೇ ಯಾಕೆ ನಗೋದನ್ನೂ ಕೂಡ ಬಿಟ್ಟಿಲ್ಲ.. ಅದರೂ ಏನೋ ಒಂಥರಾ!


ಅವಳೊಂದು ಸುಂದರವಾದ Album ಅನ್ಕೊಂಡೆ, ಅವಳ ಸಹವಾಸ ಮಾಡಿದ್ಮೆಲೇನೆ ಗೊತ್ತಾಗಿದ್ದು ಅವಳೊಂದು ದೊಡ್ಡ Dictionary ಅಂತ... ಅದಕ್ಕೆ ಏನೋ? ಅವಳು ನನ್ನ ಬಿಟ್ರೂ, ನಾನು ಅವಳನ್ನ ಮರೆಯೋಕೆ ಆಗ್ತಿಲ್ಲ.......


ಮೊದಮೊದಲು ಪ್ರೀತಿ, ಪ್ರೇಮ ಎಲ್ಲ ಪುಸ್ತಕದ ಬದನೇಕಾಯಿ ಅನ್ನಿಸೋದು. ಅದೆಲ್ಲ ಏನಿದ್ರೂ ಕತೆಗಳಲ್ಲಿ ಓದೋದಿಕ್ಕೆ, ಸಿನಿಮಾದಲ್ಲಿ ನೋಡೋದಿಕ್ಕೆ ಮಾತ್ರ ಅನ್ನಿಸೋದು... ಆದ್ರೆ ಅದರ ಅನುಭವ ಮಾಡಿದ್ಮೆಲೇನೆ ಗೊತ್ತಾಗಿದ್ದು ಒಬ್ಬರಿಗೊಸ್ಕರ ಕಾಯೋದರಲ್ಲೂ ಎಷ್ಟು ಹಿತ ಇದೆ ಅಂತ.. Great Feeling... ನನ್ನ ಪ್ರಕಾರ ಎಲ್ಲರೂ ಜೀವನದಲ್ಲಿ ಒಂದು ಸಾರಿ ಆದರೂ ಅನುಭವಿಸಲೇ ಬೇಕಾದಂತದ್ದು... ದಿನ ಪೂರ್ತಿ ಕೆಲಸಗಳ ನಡುವೆ ಎಷ್ಟೇ ಬ್ಯುಸಿ ಇದ್ರೂ At least ಗಂಟೆಗೆ ಒಂದು ಬಾರಿ ಅದರೂ ನೆನಪಾಗ್ತಾಳೆ. ಇನ್ನು ರಾತ್ರಿ ಹೊತ್ತಲಿ ಅನುಭವಿಸೋ ಯಾತನೆ ಹೇಳತೀರದು. ಅವಳಿಲ್ಲದೆ ಹಾಸಿಗೆ ಕೂಡ ಜಗದಗಲ ಅನ್ನಿಸಿಬಿಡುತ್ತೆ... ಕೆಲವೊಮ್ಮೆ ಎಲ್ಲೋ ನಾನೇ ತಪ್ಪು ಮಾಡಿದ್ನೇನೋ ಅನ್ನೋ Guiltiness Feel ಆಗುತ್ತೆ. ಆದರೂ ಯಾಕೆ ಹೀಗಾಯ್ತು ಅನ್ನೋದಕ್ಕೆ ಕಾರಣಗಳೇ ಸಿಗೋಲ್ಲ... ಒಟ್ಟಿನಲ್ಲಿ I am All Alone in Love.....


ಇನ್ನೊಂದು ಹೇಳಲಾ? ಅವ್ಳು ಜೋತೆಲಿದ್ದಾಗ ರಾತ್ರಿ ಹೊತ್ತು ಬೇಗ ಮಲಗು ಇಲ್ಲ ಅಂದ್ರೆ ಮೋಹಿನಿ ಬಂದು ಕಾಟ ಕೊಡ್ತಾಳೆ ಅನ್ನೋಳು. My Badness, ಈಗ ಅವಳೇ ಮೋಹಿನಿ ಥರಾ ರಾತ್ರಿ ಪೂರ್ತಿ ಕಾಟ ಕೊಡ್ತಾಳೆ.. ಎಂಥಾ ದುರದೃಷ್ಟ ಆಲ್ವಾ ನಂದು?


ಇನ್ನೊಂದು ವಿಷಯ ಗೊತ್ತಾ?...
ಅವಳನ್ನೇ ಆಸೆ ಪಟ್ಟೆ, ಅವಳನ್ನೇ ಪ್ರೀತಿಸ್ತೀನಿ.
ಅವಳೇ ನನ್ನ ಜೀವನ ಅಂದ್ರೆ, ಜೀವನನ ಪ್ರೀತಿಸ್ತೀನಿ.!
ಅವಳು ಬೇರೆ ಅದ್ರೂನು ಸರಿ, ದುಖಃ ಇಲ್ಲ.
ಯಾಕಂದ್ರೆ, ನಾನು ಅವಳಿಗಿಂತ ಅವಳ ಖುಷಿನ ಪ್ರೀತಿಸ್ತೀನಿ....

Wednesday, August 11, 2010

ಬರೆಯುವೆ ನಿನಗಾಗಿ...

ಪ್ರೀತಿಯ ಪುಟ್ಟಿ.... 

ದಿನ ಅದೇ ರಾಗ ಅದೇ ಹಾಡು ಅಂತ ಬೇಜಾರ್ ಮಾಡ್ಕೋಬೇಡ.. ನಿನ್ನ ಅದೆಷ್ಟು ಪ್ರೀತಿಸ್ತಿದ್ದೀನಿ ನಾನು ಅಂತ ಹೇಳೋಕೆ ಬೇರೆ ದಾರಿ ಇಲ್ಲ ಕಣೇ... ನಿನ್ನ ಮೇಲೆ ತುಂಬಾ ನಂಬಿಕೆ ಇಟ್ಟುಕೊಂಡಿದ್ದೀನಿ ಕಣೇ. ಆದ್ರೆ ನೀನು? ಆ ನಂಬಿಕೆಗೆ ದ್ರೋಹ ಮಾಡ್ತಿದ್ದೀನಿ ಅಂತ ಅನ್ನಿಸ್ತಿಲ್ಲವೇನೆ? ನೀವು ಹುಡ್ಗೀರು, ಪ್ರೀತಿ ಅಂತ ನಾಟಕ ಆಡಿ ಕಡೆಗೆ ಎಲ್ಲ ಮರೆತು ಆರಾಮಗಿರ್ತೀರ.. ಆದ್ರೆ ನಾವು ಹಾಗಲ್ಲ ಕಣೇ, ತುಂಬಾನೇ ಹಚ್ಹ್ಕೊತೀವಿ. ಪ್ರಾಮಾಣಿಕವಾಗಿ ಪ್ರೀತಿ ಮಾಡ್ತಿವಿ. ನಂಬಿಕೆ ಇಟ್ಟಿರ್ತೀವಿ. ಅದಕ್ಕೆ ಏನೋ ನಂಗೆ ಈ ಕಷ್ಟ ಬಂದಿರೋದು?

ಹೌದು ಕಣೇ, ನಾನು ಅಂದುಕೊಂಡಿರಲಿಲ್ಲ ನೀನು ಹೀಗೆ ಮಾಡ್ತೀಯ ಅಂತ. ಒಂದು ಮೆಸೇಜ್ ಗೆ Reply ಮಾಡ್ಲಿಲ್ಲ ಅಂದ್ರೆ ಪರಸ್ಪರ ಎಷ್ಟು ಬೇಜಾರ್ ಮಾಡ್ಕೊತಿದ್ವಿ ಆಲ್ವಾ? ಒಂದೊಂದು ದಿನ ನಾನು ಕಾಲ್ ಮಾಡದೆ ಇದ್ರು, ಕಾದು ಕಾದು ಕಡೆಗೆ ನೀನೆ ಕಾಲ್ ಮಾಡಿ ತೃಪ್ತಿ ಆಗೋವಷ್ಟು ಮಾತಾಡ್ತಿದ್ದೆ. ಮತ್ತೆ ಅದೇ ಒಲವಿನ ಸಂಭಾಷಣೆ ಮುಂದುವರಿತಾ ಇತ್ತು. ನಿನ್ನೊಂದಿಗೆ ಆಡುತ್ತಿದ್ದ ಮಾತು, ಜಗಳ, ತುಂಟಾಟ ಅದೇನೋ ಖುಷಿ ಇತ್ತು.

ಬಹುಶಃ ನಿಂಗೆ ನೆನಪಿರಬಹುದು, ನಾನು ನಿನ್ನ ನೋಡಿದ್ದು ಕಳೆದ ವರ್ಷ ದೀಪಾವಳಿಯಂದು. ನೀನು ಒಳಗೆ ಅಡುಗೆ ಮನೇಲಿ ಬ್ಯುಸಿಯಾಗಿದ್ರೂ, ನಾನು ನಿನ್ನ ಕದ್ದು ಕದ್ದು ಇಣುಕಿ ನೋಡ್ತಿದ್ದೆ. ನಿನ್ನಲ್ಲಿ ಅದೇನೋ ಒಂತರಾ ಆಕರ್ಷಣೆ ಇತ್ತು. ನಿನ್ನ ಜೊತೇಲಿ ಹೆಚ್ಚು ಹೆಚ್ಚು ಮಾತಾಡಬೇಕು ಅಂತ ಅನ್ನಿಸ್ತಿತ್ತು. ಆಗ್ಲೇ ನೀನು ನನ್ನ ಮನಸನ್ನ ಪ್ರವೇಶಿಸಿದ್ದು. ಆಗ ಶುರುವಾದ ಆಸೆಯ ಭಾವ ಪ್ರೀತಿಯಾಗಿ ತಿರುಗೋಕೆ ತುಂಬಾ ಸಮಯ ಏನು ಬೇಕಾಗಲಿಲ್ಲ. ನನ್ನ ಹೃದಯದಲ್ಲಿ ಗೂಡು ಕಟ್ಟಿದೆ, ನಿನ್ನ ಅಲ್ಲೇ ಬೆಚ್ಚಗೆ ಕೂರಿಸಿದ್ದೆ. ಇದೆಲ್ಲ ನಿಂಗೆ ಚೆನ್ನಾಗಿ ತಿಳಿದಿರೋ ವಿಷಯನೇ. ಆದ್ರೆ, ನೀನು ಯಾವಾಗ ಆ ಗೂಡಿಂದ ಹಾರಿಹೊದೆಯೋ ಗೊತ್ತಿಲ್ಲ. ನಾನು ಮಾತ್ರ ಕ್ಷಣ-ಕ್ಷಣ ಸಾಯ್ತಾನೆ ಇದ್ದೀನಿ. ನನ್ನ ಬಿಟ್ಟು ಹೋಗೋ ಮನಸ್ಸಾದ್ರು ಹೇಗೆ ಬಂತು? Pls ನನ್ನ ಬಿಟ್ಟು ಹೋಗಬೇಡ. ಪ್ರತಿ ದಿನ ನನ್ನ ಮೆಸೇಜ್ ಗೆ, ಕಾಲ್ ಗೆ ಹಾತೊರಿತಾ ಇದ್ದೆ ಅಲ್ವಾ? ಇವೊತ್ತು ನಿಂಗೆ ಇದೆಲ್ಲ ನೆನಪಿಲ್ವೇನೆ? ಹೇಳೇ ಪುಟ್ಟಿ, ಯಾಕೆ ಹೀಗೆ ಮಾಡ್ತಾ ಇದ್ದೀಯ?

ನಿಂಗೆ ನನಗಿಂತ ಚೆನ್ನಾಗಿರೋ ಹುಡುಗ ಸಿಗಬಹುದು ನಿಜ. ಆದ್ರೆ ನನ್ನ ನಿಸ್ವಾರ್ಥ ಪ್ರೀತಿಗೆ ನೀನು ಮೋಸ ಮಾಡ್ತಿದ್ದೀಯ ಅಂತ ಅನ್ನಿಸ್ತಿಲ್ವೇನೆ ನಿಂಗೆ? ಇದು ನ್ಯಾಯನಾ? ಅಷ್ಟಕ್ಕೂ ನಾನು ಏನು ಕಡಿಮೆ ಮಾಡಿದ್ದೆ ನಿಂಗೆ? ಮನಸ್ಸು ಬಿಚ್ಚಿ ಮಾತಾಡ್ತಾ ಇದ್ವಿ. ಕಷ್ಟ-ಸುಖ ಹೇಳ್ಕೋತಾ ಇದ್ವಿ. ನಿನ್ನ ನೋವಿಗೆ ನನ್ನ ಹೃದಯ ಮಿಡಿತಾ ಇತ್ತು. ಕಣ್ಣೀರು ಸುರಿಸ್ತಾ ಇದ್ದೆ. ನಿನ್ನ ಮಗು ತರ ಅಂದುಕೊಂಡು ಸಮಾಧಾನ ಮಾಡ್ತಾ ಇದ್ದೆ. ನೀನು ಎಲ್ಲ ನೋವುಗಳನ್ನ ಮರೆತು ನನ್ನ ಬಾಹುಗಳಲ್ಲಿ ಬಂಧಿಯಾಗ್ತಿದ್ದೆ. ಮತ್ತದೇ ಮಾತು, ಸೆಲ್ ಫೋನಲ್ಲಿ ಗಂಟೆಗಟ್ಟಲೆ ಸಂಭಾಷಣೆ, ಹುಚ್ಚು ಹುಚ್ಚಾದ SMS ಗಳು. ಈಗ ಅದ್ಯಾವುದು ಇಲ್ಲ. ಬರಿಯ ನೆನಪುಗಳು ಮಾತ್ರ. ಯಾಕೆ? ಏನಾಯ್ತು ನಿಂಗೆ? ನೀನು ದೂರ ಮಾಡಿ ಹೋದಾಗಿಂದ ನಾನು ನಾನಾಗಿ ಉಳಿದಿಲ್ಲ ಕಣೇ. ಹುಚ್ಹ ಆಗಿಬಿಟ್ಟಿದ್ದೀನಿ. ಮನೆ, ಕೆಲಸ ಯಾವುದು ಬೇಡ ಅನ್ಸುತ್ತೆ. ಪ್ಲೀಸ್ ಉತ್ತರ ಕೊಡು..

ಕೊನೆದಾಗಿ ಒಂದೇ ಒಂದು ಮಾತು, ಇದನ್ನೆಲ್ಲಾ ನಿಂಗೆ ಪುನಃ ನೆನಪು ಮಾಡಿದೆ ಅಂತ ಬೇಜಾರ್ ಮಾಡ್ಕೋಬೇಡ. ಯಾಕಂದೆ, ನೀನು ಬೇಜಾರ್ ಮಾಡ್ಕೊಂಡ್ರು Again ದುಃಖ ಪಡೋನು ನಾನು. ಬಹುಶಃ ನೀನು ಎಲ್ಲಾನು ಮರೆತಿರಬಹುದು ಅಂತ ಜ್ಞಾಪಕ ಮಾಡಿದೆ ಅಷ್ಟೇ.....

--
Only Your's for the Rest of My Life..!!!


(ಸ್ಪೂರ್ತಿ : ಈ ಗುಲಾಬಿಯು ನಿನಗಾಗಿ)

Friday, May 28, 2010

ಯಾಕೋ ಕಾಣೆ..

ತುಂಬಾ ದಿನಗಳಿಂದ ಬಿಡುವೇ ಸಿಗುತ್ತಿಲ್ಲ ಹಾಗಾಗಿ ಬ್ಲಾಗ್ ಬರೆಯೋಕೆ ಆಗ್ತಾ ಇಲ್ಲ. ಬೇರೆ ಹೇಳಿಕೊಳ್ಳೋವಂತಾ ವಿಷಯಗಳು ಏನೂ ಇಲ್ಲ. ಆದರೂ, ಮನಸಿನಲ್ಲಿ ಬಹಳ ವಿಚಾರಗಳು ನನ್ನನ್ನ ದಿನನಿತ್ಯ ಖಿನ್ನವಾಗುವಂತೆ ಮಾಡ್ತಾ ಇವೆ. ನಾನು ಎಷ್ಟೆಲ್ಲಾ ಪ್ರಯತ್ನಪಟ್ಟರೂ, ಜೀವನದಲ್ಲಿ ಆದಷ್ಟೂ ಉತ್ಸಾಹದಿಂದ ಇರಬೇಕು ಅಂದುಕೊಂಡರೂ ಆಗ್ತಾನೇ ಇಲ್ಲ. ಈ ಕೆಲದಿನಗಳಿಂದ ನನ್ನ ಜೀವನದಲ್ಲಾದ ಬದಲಾವಣೆಗಳು ಮತ್ತು ನಾನೇ ರೂಢಿಸಿಕೊಂಡ ಕೆಲ ಶೈಲಿಗಳು ನನ್ನ ಬಗ್ಗೆ ನನಗೇ ಅಸಹ್ಯ- ನಾಚಿಕೆ ಮೂಡುವಂತೆ ಮಾಡಿವೆ. ಏನಾದ್ರೂ ಒಂದು ಗುರಿ ಇಟ್ಟುಕೊಳ್ಳೋಣ ಅಂದುಕೊಂಡರೂ ಆಗುತ್ತಿಲ್ಲ. ಮನಸ್ಸು ಯಾವುದಕ್ಕೂ ರಾಜಿ ಆಗ್ತಾನೇ ಇಲ್ಲ. ಇವನೇನಪ್ಪ ಪುನಃ-ಪುನಃ ಅದನ್ನೇ ಹೇಳಿ ಬೋರ್ ಹೊಡೆಸುತ್ತಾನೆ ಅಂದುಕೋಬೇಡಿ. ಯಾಕಂದ್ರೆ ನನಗೇ ಇದನ್ನ ಬಿಟ್ರೆ ಹೇಳಿಕೊಳ್ಳೋಕೆ ಬೇರೆ ಯಾವ ವಿಷಯಗಳೂ ಇಲ್ಲ, ಹೇಳಿಕೊಳ್ಳೋವಂತಾ ಕೆಲಸಗಳನ್ನೂ ಕೂಡ ಮಾಡಿಲ್ಲ. ಇನ್ನೂ ತುಂಬಾ ಇದೆ ಆದ್ರೆ ಈಗ ಬಿಡುವಿಲ್ಲ. ಮತ್ತೆ ಎಂದಾದರು ಬಿಡುವು ಸಿಕ್ಕಾಗ ಎಲ್ಲ ಹೇಳ್ತೀನಿ. ಆದ್ರೆ ನಿಮಗೆ ನನ್ನ ಬಗ್ಗೆ ಏನಾದ್ರು ಬರೀಬೇಕು ಅನ್ನಿಸಿದ್ರೆ ದಯವಿಟ್ಟು ಇ-ಮೇಲ್ ಮಾಡಿ.

Monday, April 12, 2010

ಪ್ರೀತಿಯೆಂದರೆ ಹೀಗೇನಾ?!

ತು೦ಬಾ ದಿನಗಳಿ೦ದ ಕೆಲಸ ತುಸು ಜಾಸ್ತಿ ಇತ್ತು, ಬಿಡುವು ಸಿಕ್ಕಿರಲಿಲ್ಲ. ಹಾಗಾಗಿ ಬ್ಲಾಗ್ ಬರೆಯಲಿಕ್ಕೆ ಆಗಿರಲಿಲ್ಲ. ಈಗಲೂ ಕೆಲಸ ಮ೦ಡಿ ಉದ್ದ ಇದೆ, ಆದ್ರೂ ಸ್ವಲ್ಪ ಬಿಡುವು ಮಾಡಿಕೊ೦ಡು ಬರೆಯುತ್ತಿದ್ದೆನೆ.


ಅದೇನಾಯ್ತೋ ಕಾಣೆ, ಇತ್ತೀಚೆಗೆ ಮನಸ್ಸು ತು೦ಬಾ ಭಾವುಕವಾಗಿಬಿಟ್ಟಿದೆ. ಮನದಾಳದಲ್ಲಿ ಅಡಗಿದ್ದ ಅಷ್ಟೂ ಭಾವನೆಗಳೂ ಕೆಲದಿನಗಳಿ೦ದ ಮನಸನ್ನ ಚೂರು ಚೂರಾಗಿ ಮಾಡಿಬಿಟ್ಟಿವೆ. ಎಲ್ಲಿಯೂ ಸಮಾಧಾನ ಸಿಗ್ತಾನೆ ಇಲ್ಲ. ಇದಕ್ಕೆಲ್ಲ ಕಾರಣ ನಾನು ಮಾಡಿದ ಒ೦ದೇ ಒ೦ದು ತಪ್ಪು, "ಪ್ರೀತಿ".

ನಾನು ನನ್ನ ಇಷ್ಟು ವರ್ಷಗಳ ಜೀವನದಲ್ಲಿ ಯಾವತ್ತಿಗೂ ಪ್ರೀತಿಯ ಬಗ್ಗೆ ಆಸಕ್ತಿ ತೋರಿದವನೇ ಅಲ್ಲ, ಅದರ ಬಗ್ಗೆ ಭಯವೂ ಇತ್ತು. ಇದ್ದಕ್ಕಿದ್ದ೦ತೆ ನನ್ನ ಬುದ್ದಿಗೆ ಅದೆನಾಯ್ತೋ ಕಾಣೆ, ಅದ್ಯಾವ ಮಾಹೆ ಆವರಿಸಿಕೊ೦ಡಿತೋ ಕಾಣೆ ಅಥವಾ ಮನಸು ಒ೦ಟಿಯಾಗಿ ಇರಲಾರದೆ ಸಾ೦ಗತ್ಯವನ್ನ ಬಯಸಿತೋ ಕಾಣೆ. ಕೆಲತಿ೦ಗಳ ಹಿ೦ದೆ ಅದರ ಬಲೆಗೆ ಬಿದ್ದೆ, ಈಗ ಅದರಿ೦ದಾದ ಪರಿಣಾಮಕ್ಕೆ ಪಶ್ಚಾತಾಃಪ ಪಡುತ್ತಿದ್ದೇನೆ. ಪ್ರತಿದಿನ ಮಾನಸಿಕ ಹಿ೦ಸೆ ಅನುಭವಿಸುತ್ತಿದ್ದೇನೆ. ನನ್ನ ಮನದಾಳದ ನೊವುಗಳು ನನ್ನನ್ನ ಮೌನವಾಗಿ ಅಳುವ೦ತೆ ಮಾಡಿವೆ, ಅಳುತಿದ್ದೇನೆ ಕೂಡ.

ನನಗೆ ನನ್ನ ಪ್ರೀತಿ ಸಿಗಲಿಲ್ಲ ಅನ್ನೋ ಬೇಜಾರು ಒ೦ಚೂರು ಇಲ್ಲ. ಆದ್ರೆ, ನನ್ನವಳಿಗೆ ನನ್ನ ಭಾವನೆಗಳೇಕೆ ಅರ್ಥವಾಗ್ಲಿಲ್ಲ ಅನ್ನೋದನ್ನ ನೆನಿಸಿಕೊ೦ಡ್ರೆನೇ ಮನಸ್ಸಿಗೆ ತು೦ಬಾ ನೋವಾಗುತ್ತೆ. ಆದ್ರೂ ಒ೦ದು ಸಮಾಧಾನದ ಸ೦ಗತಿ ಏನ೦ದ್ರೆ, ನನ್ನ ಜೀವನಕ್ಕೆ ಸಾಕಾಗಿ ಉಳಿಯುವಷ್ಟು ಪ್ರೀತಿಯ ನೆನಪನ್ನು ನನ್ನವಳು ಧಾರೆ ಎರೆದಿದ್ದಾಳೆ. ಅವಳ ಮೊಹದಲ್ಲಿದ್ದ ಪ್ರತೀ ಗಳಿಗೆಯೂ ಉಲ್ಲಾಸ. ಈಗಲೂ ಸಹ ಅವಳನ್ನೇ ಜಪಿಸುತ್ತಿದ್ದೇನೆ. ಕಾರಣ ಅದನ್ನ ಬಿಟ್ರೆ ನ೦ಗೆ ಬೇರೆ ಕೆಲ್ಸ ಇಲ್ಲ ಅ೦ತಲ್ಲ ಅಥವಾ ಅವಳನ್ನ ಬಿಟ್ಟು ನ೦ಗೆ ಬಾಳೋಕಾಗಲ್ಲ ಅ೦ತಲ್ಲ.   ನನ್ನ ಜೀವನದಲ್ಲಿ ನಾನು ಎ೦ದೂ ಅನುಭವಿಸದೇ ಇದ್ದ ಪ್ರೀತಿಯ ಸಾಕಷ್ಟು ಅನುಭವಗಳನ್ನ ನ೦ಗೆ ಕೊಟ್ಟಿದ್ದಾಳೆ. ಒಳ್ಳೆ ಹುಡ್ಗಿ, ನ೦ಗೆ ಅವಳೇ ಸ್ಪೂರ್ತಿ...

Thursday, March 18, 2010

ಮತ್ತದೇ ಬೇಸರ...

ತೀರ ಇತ್ತೀಚಿಗೆ ನನ್ನ ಮನಸ್ಸು ತುಂಬಾನೆ ಕಿರಿ-ಕಿರಿ ಮಾಡ್ತಾ ಇದೆ. ಯಾವುದಕ್ಕೂ ಸರಿಯಾಗಿ ಸ್ಪಂದಿಸೋದೆ ಇಲ್ಲ. ಅದೇನಾಯ್ತೋ ಕಾಣೆ, ಭಯಂಕರ ಆಲಸ್ಯ! ಚೈತನ್ಯನೆ ಇಲ್ಲದೆ ಇರೋ ಹಾಗೆ, ಮನಸ್ಸಲ್ಲಿ  ಯಾವೊದೋ ಒಂದು ಗಂಭೀರವಾದ ವಿಚಾರ ಕೊರೆಯುತ್ತಿದೆ. ಅದನ್ನ ಎಷ್ಟೇ ಲಘುವಾಗಿ ಪರಿಗಣಿಸಿದರೂ ಹಲವು ಪ್ರಶ್ನೆಗಳು ಮತ್ತೆ ಮತ್ತೆ ಕೆಣಕಿ ಬರುತ್ತಿವೆ. ಆದ್ರೆ ಯಾವುದಕ್ಕೂ ಸರಿಯಾದ ಸಮಾಧಾನ ಸಿಗ್ತಾನೆ ಇಲ್ಲ. ಈ ಪ್ರಶ್ನೆಗಳು ಮನಸ್ಸನ್ನ ಎಷ್ಟು ಘಾಸಿ ಮಾಡಿವೆ ಅಂತಂದ್ರೆ, ನಾನು ಎಷ್ಟೇ ಪ್ರಯತ್ನಪಟ್ಟರೂ ಮಾನಸಿಕವಾಗಿ ಯಾವುದೇ ತರನಾದ ಧನಾತ್ಮಕ ಲಕ್ಷಣಗಳು ಗೋಚರಿಸುತ್ತಲೇ ಇಲ್ಲ. ಜೀವನದ ಮೇಲೆ ತಾತ್ಸಾರ ಜಾಸ್ತಿ ಆಗುತ್ತಲೇ ಇದೆ.

Wednesday, February 17, 2010

ಮರೆಯದ ನೆನಪುಗಳು...

ಅಬ್ಬಾ! ನಮ್ಮ ಬದುಕು ಎಷ್ಟೊಂದು ವಿಚಿತ್ರ ಅಲ್ವಾ? ಯಾವುದೂ ಸರಿಯಾಗಿ ನಡೆಯೋದೇ ಇಲ್ಲ. ಎಲ್ಲ ಕಡೆನೂ ಎಡವಟ್ಟು.  ಯಾವುದಕ್ಕೂ ಹೋಲಿಕೆನೇ ಇರೋಲ್ಲ.  ಇದನ್ನ ಯಾಕೆ ಹೇಳ್ತಾ ಇದೀನಿ ಅಂದ್ರೆ? ನನ್ನ ಜೀವನದ ಬಹುಪಾಲು ದಿನಗಳನ್ನ ಖುಷಿ ಇಂದ ಲವಲವಿಕೆ ಇಂದ ಕಳೆದಿದ್ದೀನಿ, ಆದ್ರೆ ಇತ್ತೀಚಿಗೆ ಕೆಲದಿನಗಳಿಂದ ಆ ಖುಷಿ ಎಲ್ಲೊ ಮರೆಯಾಗಿದೆ ಅಂತ ನನಗೆ ಅನ್ನಿಸ್ತಾ ಇದೆ. ಅದಕ್ಕೆ ಕಾರಣಗಳನ್ನ ಸತತ ಎರಡು ತಿಂಗಳಿಂದ ಪ್ರತಿ ರಾತ್ರಿ ಹುಡುಕುತ್ತಾ ಬಂದಿದ್ದೇನೆ (ಎರಡು ತಿಂಗಳಿಗಿಂತ ಮುಂಚೆ ನನಗೆ ಈ ಥರಾ ಅನ್ನಿಸಿರಲಿಲ್ಲ), ಆದ್ರೆ ಇದುವರೆವಿಗೂ ಏನು? ಯಾಕೆ? ಅಂತ ಗೊತ್ತಾಗಿಯೇ ಇಲ್ಲ. ಏನೋ ಒಂಥರಾ! ಜೀವನಾನೆ ಬೇಡ ಅನ್ನಿಸೋ ಹಾಗೆ ಜಿಗುಪ್ಸೆ, ಆಲಸ್ಯ. ಯಾಕೆ ಹೀಗಾಗ್ತಾ ಇದೆ ಅಂತ ತಿಳ್ಕೊಳೋ ಹಂಬಲ ದಿನೇ ದಿನೇ ಜಾಸ್ತಿ ಆಗ್ತಾನೆ ಇದೆಯೇ ವಿನಃ, ಅದನ್ನ ಮರೆತು ಬೇರೆ ವಿಷಯದ ಬಗ್ಗೆ ಗಮನ ಕೂಡೋಕೆ ಮನಸು ಒಪ್ತಾನೇ ಇಲ್ಲ. ಹಗಲಲ್ಲಿ ಯಾಂತ್ರಿಕ ಬದುಕು, ಸಾಕಪ್ಪ ಅನ್ನಿಸೋವಷ್ಟು ಕೆಲಸ, ಇದೆಲ್ಲದರ ಮಧ್ಯೆ ರಾತ್ರಿ ಹಾಳಾದ ಯೋಚನೆಗಳು ಒಂದೊಂದು ಮನಸ್ಸಿಗೆ ಎಷ್ಟು ಘಾಸಿ ಮಾಡಿವೆ ಅಂದ್ರೆ ಭಯ ಶುರುವಾಗಿಬಿಟ್ಟಿದೆ ಮುಂದೆ ಏನಾಗುತ್ತೋ ಅಂತ. ಬಿಡುವಿರೋವಾಗ ಎಲ್ಲಾದರು ಹೊರಗಡೆ ಹೋದ್ರೆ ಏನೋ ಒಂಥರಾ! ಯಾವುದ್ಯಾವುದೋ ಕೆಲಸಕ್ಕೆ ಬಾರದ ತಲೆ ಕೆಡಿಸೋ ಯೋಚನೆಗಳು(ತಲೆ ಇದ್ರೆ ತಾನೇ ಕೆಡೋಕೆ ಅನ್ಕೊತೀರ?). ಮನಸ್ಸು ತೀರ ಅಂತರ್ಮುಖಿ ಆಗಿ ಬಿಡುತ್ತೆ. ಇನ್ನು ಎನೇನೋ ಅನ್ನ್ಸುತ್ತೆ ಆದ್ರೆ ಅದನ್ನೆಲ್ಲ ಹೇಗೆ ಹೇಳೋದು ಪದಗಳೇ ಸಿಗ್ತಾ ಇಲ್ಲ. ನೋಡೋಣ ಎಲ್ಲಿವರೆಗೆ ಈ ಥರಾ ಅನ್ನಿಸುತ್ತೆ? ಆದರೂ ಇದೂ ಒಂಥರಾ ಹಿತ ಅನ್ನಿಸುತ್ತೆ. Anyway, Let me hope for the best..

Tuesday, February 9, 2010

ನಿದಿರೆ ಇಲ್ಲದ ರಾತ್ರಿಗಳು...!

    ಎದೆನೋವು! ಮನಸ್ಸಿಗೆ ಆತಂಕ, ತಳಮಳ ಉಂಟಾದಾಗಲೆಲ್ಲ ನನ್ನನ್ನು ಕಾಡುತ್ತಿರುವ ಅಸಾಧ್ಯ ನೋವು. ಕೆಲವೊಮ್ಮೆ ತುಂಬಾ ಜಾಸ್ತಿ ಅನ್ನಿಸಿದಾಗ ಎರಡು ಮಾತ್ರೆ ನುಂಗಿ, ಒಂದು ಗ್ಲಾಸ್ ನೀರು ಕುಡಿತೀನಿ. ಅದರೂ ಸರಿ ಹೋಗಲ್ಲ. ಬಡ್ಡಿಮಗಂದು! ಹಗಲಲ್ಲಿ ಏನೂ ಅನ್ನಿಸೋಲ್ಲ, ರಾತ್ರಿ ಹತ್ತರ ನಂತರ ಶುರುವಾಗಿ ಬಿಡುತ್ತೆ. ಕೆಲವೊಮ್ಮೆ ಸ್ವಲ್ಪ ಹೊತ್ತು, ಕೆಲವೊಮ್ಮೆ ರಾತ್ರಿ ಪೂರ್ತಿ ಇದ್ದು ನಿದ್ದೆ ಮಾಡೋಕೆ ಆಗೋಲ್ಲ.  ಆಗಾಗ ನೆನಪುಗಳು ಕನಸಲ್ಲಿ ಎಷ್ಟು ಕಾಡ್ತವೆ ಅಂದ್ರೆ, ಕೆಲವೊಮ್ಮೆ ತೀರ ಸನಿಹಕ್ಕೆ ಬಂದು ಆಲಂಗಿಸಿದಂತೆ ತೋರಿ ಬಿಡುತ್ತವೆ. ಆ ನೆನಪುಗಳನ್ನ ಮೆಲಕು ಹಾಕುವಾಗಲೆಲ್ಲ ಹೃದಯ ಬಡಿತದಲ್ಲೂ ಏರುಪೇರು! ಆ ಮಧುರ ಕ್ಷಣಗಳನ್ನ ನೆನಸಿಕೊಂಡ್ರೆ ಮನಸ್ಸಿಗೆ ಹರ್ಷವೋ, ದುಃಖವೋ, ಸಂಕಟವೋ ಅದೆನಾಗುತ್ತೆ ಅಂತ ತಿಳಿಯದು. ಎದೆನೋವು ತುಂಬಾ ಜಾಸ್ತಿ ಆದಾಗ ಮಾತ್ರೆ ತಿಂದು ಎದೆ ಗಟ್ಟಿಯಾಗಿ ಹಿಡಿದು ಕುಳಿತಾಗ ಯಾರೋ ಬಂದು "Take It Easy" ಎಂದು ತಲೆ ಸವರಿದ ಹಾಗಾಗುತ್ತೆ.

   "ಇನ್ನು ಎಷ್ಟು ದಿನ ಅಂತ ಹೀಗೆ ಇರ್ತೀಯ ಬೇಗ ಮಾಡುವೆ ಮಾಡ್ಕೋ" ಅಂತ ಯಾರಾದ್ರು ಹೇಳಿದ್ರೆ ತುಂಬಾ ಕೋಪ ಸಹಿಸಲಾರದಷ್ಟು ಸಿಟ್ಟು. ಹೌದು ಬೇರೆ ಯಾವ ತರಹದ ಸಮಸ್ಯೆಗಳು ಇಲ್ಲದಿದ್ದರೂ, ಏನೋ ಒಂಥರಾ! ಮನಸ್ಸಿಗೆ ನೆಮ್ಮದಿನೇ ಇಲ್ಲ. ಎಷ್ಟೋ ಸಲ ಸತ್ತೆಬಿಡೋಣ ಅನ್ನಿಸ್ತದೆ, ಆದ್ರೆ  ಕೆಲವೊಮ್ಮೆ ಇಷ್ಟು ಬೇಗ ಸಾಯೋಕೆ ನಂಗೆ ಅಂತದ್ದು ಏನಾಗಿದೆ ಅನ್ನಿಸ್ತದೆ. ಇನ್ನು ಕೆಲವೊಮ್ಮೆ  ನನ್ನ ಭಾವನೆಗಳನ್ನ ಅರ್ಥ ಮಾಡಿಕೊಳ್ಳೋರು  ಯಾರೂ ಇಲ್ಲವಲ್ಲ ಅಂತ ತೀರ ದುಃಖ ಕೂಡ ಆಗುತ್ತೆ. ರಾತ್ರಿ ಹೊತ್ತು ಒಬ್ಬನೇ ಕುಳಿತುಕೊಂಡು ಸಿಗರೆಟಿಂದ ಹೋಗೆ ಸುರುಳಿ ಸುರುಳಿಯಾಗಿ ಬಿಡ್ತಾ, ಅಷ್ ಟ್ರೇ ಹುಡುಕುವಾಗ ಇಷ್ಟೇನಾ ಜೀವನ ಅಂತ ಬೇಸರ ಕೂಡ ಆಗುತ್ತೆ.

  ದಿನ ರಾತ್ರಿ ಮಲಗೋಣ ಅಂತ ಕಣ್ಣು ಮುಚ್ಚಿದರೆ ಸಾಕು ಅದೇ ನೆನಪುಗಳು. ಹಗಲಲ್ಲಿ ಮರೆತಹಾಗಿರೋ ಎಲ್ಲ ನೆನಪುಗಳೂ ರಾತ್ರಿ ವೇಳೆ ಒಮ್ಮೆಲೇ ಬಂದು ದಾಳಿ ಮಾಡುತ್ವೆ. 'ಅತೀ ಮಾಡಿಕೊಳ್ಳೋದು ಬೇಡ ಆದಷ್ಟು ಮರೆಯೋಣ ಅಂದುಕೊಂಡಾಗಲೆಲ್ಲಾ, ಜಾಸ್ತಿ ಆಗುತ್ತೆ. ಕೆಲವೊಮ್ಮೆ ದೇವರ ಹತ್ರ ಬೇಡ್ಕೊತೀನಿ, 'ಆದಷ್ಟು ಬೇಗ ನನ್ನ ಈ ಖಾಯಿಲೆಯಿಂದ ಪಾರುಮಾಡು ಅಂತ. ನಂಗೆ ಈಗಲೂ ಕೂಡ ತಿಳಿಯುತ್ತಿಲ್ಲ ಈ ಥರಾ ಯಾಕೆ ಅಂತ! ಕೆಲವೊಮ್ಮೆ ಎಷ್ಟು ಹಿತ ಅನ್ನಿಸುತ್ತೆ ಅಂದ್ರೆ ಇದು ಭ್ರಮೇನೋ? ನಿಜಾನೋ? ಒಂದು ಅರ್ಥ ಆಗೋಲ್ಲ. ಅರ್ಥ ಮಾಡಿಕೊಳ್ಳೋಕೆ ಪ್ರಯತ್ನ ಪಟ್ಟಾಗಲೆಲ್ಲ ನಿರಾಶೆ. ಯಾಕಂದ್ರೆ ಏನೊಂದೂ ಅರ್ಥ ಆಗೋದಿಲ್ಲ.

  ಸುಮಾರು ಒಂದು ಐದಾರು ತಿಂಗಳಾಗಿರಬಹುದು, ಈ ಥರಾ ಭಾವನೆಗಳು ಮಾನಸಿಕವಾಗಿ ಹತ್ತಿರ ಬಂದಿರೋದು. ಆ ಭಾವನೆಗಳಿಂದಲೇ, ಮನಸ್ಸಿನಲ್ಲಿ ತಳ-ಮಳ. ಕೆಲವೊಮ್ಮೆ ಅರಿವಾಗದ, ಕಾರಣ ತಿಳಿಯದ ಅನ್ಯಮನಸ್ಕತೆ.  ಆಫೀಸಿನಲ್ಲಿ ಒಂಟಿಯಾಗಿ ಕುಳಿತಾಗ, ನಡು ರಾತ್ರಿವರೆಗೂ ಟಿ.ವಿ ನೋಡುವಾಗ ಆಗಾಗ ಅದರ ಬಗ್ಗೆಯೇ ಚಿಂತೆ.ಒಮ್ಮೊಮ್ಮೆ ಆ ನೆನಪುಗಳು ಎಷ್ಟು ಹಿತವಾಗಿರುತ್ತೆ ಅಂದ್ರೆ, ಚೇತೋಹಾರಿ ಅನ್ನಿಸುತ್ತೆ. ಕೆಲವೊಮ್ಮೆ ಅದೇ ನನ್ನ ಮಾನಸಿಕ ಬಳಲಿಕೆಯ ಕಾರಣ ಎನಿಸಿ, ಒಂದು ರೀತಿಯ ತೊಳಲಾಟ ಶುರುವಾಗಿ ಬಿಡುತ್ತೆ. ಕೆಲವೊಮ್ಮೆ ನನ್ನ ಈ ಒಂಟಿತನವೇ ಕಾರಣ ಅನ್ನಿಸಿಬಿಡುತ್ತೆ. ಆದ್ರೆ, ಯಾವುದೇ ಒಂದು ನಿರ್ದಿಷ್ಟ ಕಾರಣವೂ ತೋಚದೆ ನಾನು ನಿಸ್ಸಹಾಯಕನಂತೆ ಹೊರಳಾಡೋದಂತೂ ನಿಜ...

Sunday, January 31, 2010

ಹಾಗೆ ಸುಮ್ಮನೆ- 2

ಅಬ್ಬಾ! ನೆನೆಸ್ಕೊಂಡ್ರೆ ಭಯ ಶುರು ಆಗ್ತದೆ. ಜೀವನ ಯಾಕೆ ಈ ಥರಾ? ವಿಚಿತ್ರ ಅಲ್ವಾ? ಅಂತದ್ದೇನು ಅಂತೀರಾ? ಅಯ್ಯೋ! ಏನ್ ಹೇಳಲಿ. ಜೀವನ ಒಂಥರಾ ನಮ್ಮಪ್ಪನ್ ಕಾಲದ ಹಳೆ ಸ್ಕೂಟರ್ ಥರಾ ಆಗೋಗಿದೆ. ಬಗ್ಗಿಸಿ ಬಗ್ಗಿಸಿ ಕಿಕ್ಕ್ ಹೊಡೆದು ಸ್ಟಾರ್ಟ್ ಮಾಡಬೇಕು. Pick Up, ಮೈಲೇಜ್ ಯಾವುದೂ ಇಲ್ಲ. ನಿಲ್ಲಿಸಿದರೆ ಸಾಕು ಪುನಃ ಸ್ಟಾರ್ಟ್ ಮಾಡೋಕೆ, ಹರ ಸಾಹಸ ಪಡಬೇಕು. ಯಾವುದಾದರು ಒಂದು ಯೋಚನೆ ಮಾಡಿದ್ರೆ ಅಲ್ಲೇ ನಿಂತುಬಿಡುತ್ತೆ ಮನಸು, ಮುಂದೆ ಹೋಗೋದೇ ಇಲ್ಲ. ಎಲ್ಲ ಒಂಥರಾ ಮಂಕಾದ ಹಾಗೆ. ಬೆಳಿಗ್ಗೆ ಎದ್ದೆಳೋಕೆ ಸೋಮಾರಿತನ. ಇನ್ನು ಸ್ನಾನ ಮಾಡಿ ಆಫೀಸ್ ಗೆ ಹೊರಟೆ ಅಂದ್ರೆ, ಅರ್ಧ ದಿನದ ಕೆಲಸ ಮುಗಿದ ಹಾಗೆ. ಅಲ್ಲಿವರೆಗೂ ಯಾವುದಕ್ಕೂ ಮನಸಿರೋಲ್ಲ. ಇನ್ನು ಆಫೀಸ್ ಗೆ ಹೋದ್ರೆ, ಬೇಜಾರು. ಅದೇ ಆಫೀಸು, ಅದೇ ಕೆಲಸ, ಅದೇ Tension, ಅದೇ ಬಾಸ್. ಥೂ! ಹೊಸದೇನೂ ಇಲ್ಲ. ಎಲ್ಲ ಯಾಂತ್ರಿಕತೆ. ಒಂಥರಾ ನಾನು Mechene ಅಗೊಗಿದ್ದಿನಿ ಅನ್ಸುತ್ತೆ. ಹೊರಗಡೆ ಜನರನ್ನ ನೋಡ್ತಾ ಇದ್ರೆ, ಹೊಟ್ಟೆ ಉರಿ ಬರುತ್ತೆ. ಯಾಕೆ ಅಂತೀರಾ? ಎಲ್ಲರೂ ಸುಖಿ, ನಾನೊಬ್ಬನೇ ಮಾತ್ರ ಈ ಥರಾ ಅನ್ನಿಸಿಬಿಡುತ್ತೆ. ಒಂದೊಂದು ಸಲ ಆಳವಾಗಿ ಯೋಚನೆ ಮಾಡಿದಾಗ, "ಅಬ್ಬಾ! ಏನಪ್ಪಾ ಈ ಜನ, ಬದುಕೋಕೆ ಏನೆಲ್ಲ ಮಾಡ್ತಾರೆ?" ಅನ್ಕೊಂಡು ಸುಮ್ಮನಾಗ್ತೀನಿ. ಇದನ್ನೆಲ್ಲಾ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ, ಮೊನ್ನೆ ನನ್ನ ಹಳೆ ಸ್ನೇಹಿತರೊಬ್ಬರು ಫೋನ್ ಮಾಡಿದ್ರು(ತಪ್ಪು ತಿಳ್ಕೊಬೇಡಿ, ಸ್ನೇಹಿತರಲ್ಲಿ ಹಳೆಬರು ಅಂತಾ ಇರೋಲ್ಲ; ನಾವೇ ಅವರನ್ನ ತುಂಬಾ ದಿನಗಳಿಂದ ಭೇಟಿ ಮಾಡಿರೋಲ್ಲ. ಹಾಗಾಗಿ) "ಏನಪ್ಪಾ ಸಮಾಚಾರ? ಹೇಗಿದೆ ಜೀವನ?" ಅಂತ ಕೇಳ್ದೆ. ಏನೇನೋ ಹೇಳ್ತಾ ಇದ್ರು. (ಅದನ್ನೆಲ್ಲ ಇನ್ನೊಂದು ಸಲ ಹೇಳ್ತೀನಿ) ಆಗ ಅನ್ಕೊಂಡೆ, "ಈ ಪ್ರಪಂಚನೆ ಹೀಗೆ" ಅಂತ. ಆಗ ನಿನ್ನೆ ಪತ್ರಿಕೆಯಲ್ಲಿ ಅಮೇರಿಕಾದ ಒಬ್ಬ ಪ್ರಖ್ಯಾತ ಕಾದಂಬರಿಕಾರ ಜೆ.ಡಿ. ಸಾಲಿಂಜೆರ್ ಬಗ್ಗೆ ಲೇಖನ ಬಂದಿದ್ದು ನೆನಪಾಯ್ತು. ಪಾಪ ನಿನ್ನೆ ಅಂದ್ರೆ ಶುಕ್ರವಾರ ಸತ್ತೊದ್ರಂತೆ, ಎಂಥಾ ಮಹಾನ್ ವ್ಯಕ್ತಿ. ಕಳೆದ ನಾಲ್ಕೈದು ದಶಕಗಳಿಂದ. ಯಾರೊಬ್ಬರಿಗೂ ಸಂದರ್ಶನ ಕೊಟ್ಟಿಲ್ವಂತೆ, ಹಾಗೆ ಯಾವುದೇ ಪುಸ್ತಕವನ್ನೂ ಪ್ರಕಟ ಮಾಡಿಲ್ವಂತೆ. ಏಕಾಂಗಿಯಾಗೆ ಅರ್ದ ಜೀವನ ಕಳೆದಿದ್ದರಂತೆ. ನಿಜವಾಗಲು Great ಅನ್ನಿಸ್ತು. ಏನಾದ್ರು ಅವರು ಬದುಕಿದ್ದು, ಇಲ್ಲೇ ನಮ್ಮೊರಿನ ಹತ್ರ ಇದ್ದು, ಅವರ ಬಗ್ಗೆ ತಿಳಿದಿದ್ರೆ ಗ್ಯಾರಂಟೀ ಅವರತ್ರ ಸಲಹೆ ಕೇಳ್ತಾ ಇದ್ದೆ.

Saturday, January 23, 2010

ಹಾಗೆ ಸುಮ್ಮನೆ..

      ಯಾಕೋ ಗೊತ್ತಿಲ್ಲ, ಏನಾದ್ರು ಬರೆಯೋಣ ಅನ್ಕೋತೀನಿ, ಬರೆಯೋಕೆ ತುಂಬಾ ವಿಷಯಗಳು ಸಿಗುತ್ವೆ. ಆದ್ರೆ ಬರೆಯೋಕೆ ಕುಳಿತಾಗ ಯಾವುದೂ ತೋಚಲ್ಲ.. ಅದ್ರೂ ಈ ಸಲ ಬರಿಲೇ ಬೇಕು ಅಂತ ಧೃಡ ನಿರ್ಧಾರ ಮಾಡಿಯೇ ಕುಳಿತಿದ್ದೀನಿ. ಅದು ಬೇರೆ ಏನಿಲ್ಲ, ನನ್ನ ಮನಸಲ್ಲಿ ಕೆಲವು ವಿಚಾರಗಳು ಹಾಗೆ ಉಳಿದು ಹೋಗಿವೆ, ಅದನ್ನ ಅಳಿಸಿ ಹಾಕೋಕೆ ಮತ್ತೆ ನನಗೆ ನಾನೇ ಸಮಾಧಾನ ಮಾಡ್ಕೊಳ್ಳೋಕೆ ನಿಮಗೆ ಕೆಲವೊಂದು ವಿಷಯಗಳ ಬಗ್ಗೆ ಸಲಹೆ ಕೇಳ್ತೀನಿ. ದಯವಿಟ್ಟು ಕೋಪ ಮಾಡಿಕೊಳ್ಳದೆ, ಆದಷ್ಟು ನಿಮ್ಮ ನಿಮ್ಮ ಅಭಿಪ್ರಾಯಗಳನ್ನ ತಿಳಿಸಿ. ಮತ್ತೆ Sorry, ಯಾಕೆ ಅಂತೀರಾ? ಮೊನ್ನೆ ನಾನು ಬ್ಲಾಗ್ ಶುರು ಮಾಡಿದಾಗ ನಿಮಗೆಲ್ಲರಿಗೂ ನಮಸ್ಕಾರ ಮಾಡಿದ್ದೆ, ಅದಕ್ಕೆ ಕೆಲವು ಹಿತೈಷಿಗಳು ನಿಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದೀರ. ನಿಮಗೆ ತುಂಬಾ ತುಂಬಾ ಧನ್ಯವಾದಗಳು, ಮತ್ತು ನಾನು ನಿಮಗೆ ಅಭಾರಿ. ಈ ನಿಮ್ಮ ಪ್ರೋತ್ಸಾಹವೇ ನನಗೆ ಸ್ಫೂರ್ತಿ. ಅಯ್ಯೋ! ನೋಡಿ ನಾನು ಯಾವಾಗಲೂ ಹೀಗೇನೆ, ಒಂದು ಕೆಲ್ಸನಾ ನೆಟ್ಟಗೆ ಮಾಡೋಲ್ಲ. ಕೋಪ ಮಾಡ್ಕೋಬೇಡಿ. Please.....

     ಸರಿ ಈಗ ವಿಷಯಕ್ಕೆ ಬರ್ತೀನಿ,
ನನ್ನ ಪ್ರಶ್ನೆ: ಮನಸನ್ನ ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳೋದು ಹೇಗೆ? ಇದರ ಬಗ್ಗೆ ನಿಮ್ಮ ಸಲಹೆ, ಸೂಚನೆ ಮತ್ತೆ ಅಭಿಪ್ರಾಯಗಳನ್ನ ತಿಳಿಸಿ. ಮತ್ತೆ, "ಇವನೆನಪ್ಪ ಖಾಲಿ-ಪೋಲಿ ಸುಮ್ನೆ ಕಾಲ ಕಳೆಯೋಕೆ ಏನೇನೋ ಹೇಳ್ತಾನೆ, ಇದರಿಂದ ನಮಗೇನು ಭಾಗ್ಯ" ಅನ್ಕೋಬೇಡಿ. ದಯವಿಟ್ಟು ಆದಷ್ಟು ನಿಮ್ಮ ಅಭಿಪ್ರಾಯಗಳನ್ನ ತಿಳಿಸಿ. ಯಾಕಂದ್ರೆ, ನಿಮ್ಮ ಉತ್ತರಗಳು ನನಗೆ ಸಮಾಧಾನ ನೀಡಬಲ್ಲವು.
--
ಧನ್ಯವಾದಗಳು



Thursday, January 21, 2010

ನಮಸ್ಕಾರ

ಏನಪ್ಪಾ ಇವ್ನು ಶುರುವಿನಲ್ಲೇ ನಮಸ್ಕಾರ ಮಾಡ್ತಿದ್ದಾನೆ ಅನ್ಕೋಬೇಡಿ, ಬ್ಲಾಗ್ ಗೆ ಹೊಸಬ ಏನು ಬರೆಯೋದು ಅಂತ ಅರ್ಥ ಆಗ್ಲಿಲ್ಲ. ಸುಮ್ನೆ ಕುತೂಹಲಕ್ಕೆ ಅಂತ ಬ್ಲಾಗ್ ಶುರು ಮಾಡಿದ್ದೀನಿ. ನಿಮ್ಮ ಅನುಭವ ಅಥವಾ ಸಲಹೆಗಳು ಇದ್ರೆ ಹೇಳಿ, ನೋಡೋಣ ಪ್ರಯತ್ನ ಮಾಡ್ತೀನಿ.

ಇನ್ನು, ನನ್ನ ಬಗ್ಗೆ ಹೇಳ್ಕೊಳೋದು ಏನು ಇಲ್ಲ. ಇಲ್ಲೇ ಬೆಂಗಳೂರಲ್ಲೇ ಯಾವುದೋ ಒಂದು ಸಣ್ಣ ಕೆಲಸ ಮಾಡ್ಕೊಂಡು ಆರಾಮಾಗಿದ್ದೀನಿ. ಒಂಟಿತನ ತುಂಬಾ ಇಷ್ಟ, ಆದ್ರೆ ಕೆಲವೊಮ್ಮೆ ತುಂಬಾ ಬೇಜಾರು. ಏನ್ ಮಾಡೋದು? ಎಲ್ಲಾನು ಅನುಭವಿಸಬೇಕಲ್ಲ? ಸರಿ ಹಾಗಾದ್ರೆ, ಏನಾದ್ರು ಹೊಸ ಐಡಿಯಾಗಳು ಇದ್ರೆ ಹೇಳಿ.