Wednesday, August 8, 2012

ಹಾಗೆ ಸುಮ್ಮನೆ...

ಒಬ್ಬ ವ್ಯಾಪಾರಿ ಎಂದಿನಂತೆ ವಸ್ತುಗಳನ್ನೆಲ್ಲ ಹೆಗಲಿಗೇರಿಸಿ ಮನೆಮನೆಗೆ ಮಾರಲು ಹೊರಟ. ಮಾರನೆ ದಿವಸ ಹಬ್ಬವಿತ್ತು ಆದ್ದರಿಂದ ತನ್ನ ಬಳಿಯಿದ್ದ ಅಷ್ಟೂ ಹಣದಿಂದ ತುಸು ಹೆಚ್ಚೇ ವಸ್ತುಗಳನ್ನು ಖರೀದಿಸಿದ್ದ. ಅವನ ಬಳಿ ಒಂದೂ ನಯಾ ಪೈಸೆಯೂ ಹಣ ಉಳಿದಿರಲಿಲ್ಲ. ಮಾರಾಟದಿಂದ ಬರುವ ಹಣವನ್ನು ತನ್ನ ಖರ್ಚು-ವೆಚ್ಚಗಳಿಗೆ ವಿನಿಯೋಗಿಸಿದರಾಯಿತೆಂದು ಬೀದಿ ಬೀದಿಯಲ್ಲಿ ಮಾರುತ್ತ ಹೊರಟ. ಅವನ ದುರಾದೃಷ್ಟವೋ ಏನೋ ಆ ದಿನ ಸಂಜೆಯಾದರೂ ಯಾವುದೊಂದು ವಸ್ತುವೂ ಮಾರಾಟವಾಗಲಿಲ್ಲ. ಬೆಳಗಿನಿಂದ ಏನನ್ನೂ ತಿನ್ನದ ಕಾರಣ ಹೊಟ್ಟೆ ತುಂಬಾ ಹಸಿಯುತ್ತಿತ್ತು. ಏನು ಮಾಡುವುದೆಂದು ಆಲೋಚಿಸುತ್ತಿದ್ದಾಗ, ಥಟ್ಟನೆ ಒಂದು ಉಪಾಯ ಹೊಳೆಯಿತು. ರಸ್ತೆ ಬದಿಯಲ್ಲಿ ಬಿದ್ದಿದ್ದ ಒಂದೆರಡು ಕಲ್ಲುಗಳನ್ನು ಚೀಲದಲ್ಲಿರಿಸಿಕೊಂಡು ನೇರವಾಗಿ ಎದುರಿನ ಮನೆಯ ಕಡೆ ನಡೆದ. ಹೋದವನೇ ತನ್ನ ಬಳಿ ಇದ್ದ ಅಷ್ಟು ವಸ್ತುಗಳನ್ನು ಆ ಮನೆಯ ಹೆಂಗಸಿಗೆ ತೋರಿಸಿದ, ಆ ಹೆಂಗಸು ಎಲ್ಲವನ್ನು ನೋಡಿ ಇದೆಲ್ಲ ನಮ್ಮ ಬಳಿ ಇವೆ ಹಾಗಾಗಿ ಬೇಡವೆಂದಳು. 

ಆಗ ವ್ಯಾಪಾರಿ ತನಗೆ ಮೊದಲೇ ಹೊಳೆದಿದ್ದ ಉಪಾಯನ್ನು ಇಲ್ಲಿ ಪ್ರಯೋಗಿಸಲು ಮುಂದಾದ. 'ಮೇಡಂ, ನನಗೆ ಕಲ್ಲಿನಿಂದ ರುಚಿಯಾದ ರಸಂ ಮಾಡಲು ಬರುತ್ತದೆ, ನೀವು ಒಪ್ಪಿದರೆ ಅದನ್ನು ನಿಮಗೂ ಕಲಿಸಿಕೊಡುತ್ತೇನೆ' ಎಂದ. ಆ ಹೆಂಗಸು ಆಶ್ಚರ್ಯದಿಂದ ಸರಿ ಬನ್ನಿ ಎಂದು ಅಡುಗೆಮನೆಗೆ ಕರೆದುಕೊಂಡು ಹೋದಳು. ವ್ಯಾಪಾರಿ ಹೋದವನೇ ರಸಂ ಮಾಡುವ ಕೆಲಸವನ್ನು ಶುರುಮಾಡಿದ. ಒಲೆ ಹಚ್ಚಿ, ಪಾತ್ರೆಯಲ್ಲಿ ಸಾಮಾನ್ಯವಾಗಿ ರಸಂ ಮಾಡಲು ಬಳಸುವ ಎಲ್ಲ ವಸ್ತುಗಳನ್ನು ಹಾಕಿ ತದನಂತರ ತನ್ನ ಬಳಿಯಿದ್ದ ಕಲ್ಲುಗಳನ್ನೂ ಪಾತ್ರೆಯಲ್ಲಿ ಹಾಕಿದ. ಸ್ವಲ್ಪ ಹೊತ್ತಿನ ಬಳಿಕ 'ರಸಂ ತಯಾರಿದೆ ಮೇಡಂ, ರುಚಿ ನೋಡಿ' ಎಂದು ಗ್ಲಾಸಿನಲ್ಲಿ ಹಾಕಿಕೊಟ್ಟ. ಆ ಹೆಂಗಸು ಕುಡಿದು ನೋಡಿ 'ಬಹಳ ಚೆನ್ನಾಗಿದೆ, ನೀವು ಕುಡಿಯಿರಿ ಎಂದಳು. ಈ ಸಮಯಕ್ಕಾಗಿಯೇ ಕಾಯುತ್ತಿದ್ದ ವ್ಯಾಪಾರಿ ಸ್ವಲ್ಪ ಕುದಿದಂತವನಂತೆ ನಟಿಸಿ 'ಇದರ ಜೊತೆ ಸ್ವಲ್ಪ ಅನ್ನವಿದ್ದರೆ ಇನ್ನು ರುಚಿಕರವಾಗಿರುತ್ತಿತ್ತು' ಎಂದ. ಕೂಡಲೇ ಆ ಹೆಂಗಸು ತಟ್ಟೆಯಲ್ಲಿ ಅನ್ನವನ್ನು ಹಾಕಿ 'ಈಗ ತಿಂದು ನೋಡಿ' ಎಂದಳು. ಚೆನ್ನಾಗಿದೆ ಇನ್ನು ಸ್ವಲ್ಪ ಅನ್ನ ಹಾಕಿ ಎಂದು ಕೇಳಿ ಹಾಕಿಸಿಕೊಂಡು ಚೆನ್ನಾಗಿ ತಿಂದು ಹೊಟ್ಟೆ ತುಂಬಿಸಿಕೊಂಡು ಮುಂದೆ ನಡೆದ.

ನೀತಿ: ಮನಸಿದ್ದರೆ ಮಾರ್ಗವಿದೆ.

1 comment:

  1. ನಿಜ....ಮನಸ್ಸಿದ್ದರೆ ಮಾರ್ಗ...

    ReplyDelete