Tuesday, February 9, 2010

ನಿದಿರೆ ಇಲ್ಲದ ರಾತ್ರಿಗಳು...!

    ಎದೆನೋವು! ಮನಸ್ಸಿಗೆ ಆತಂಕ, ತಳಮಳ ಉಂಟಾದಾಗಲೆಲ್ಲ ನನ್ನನ್ನು ಕಾಡುತ್ತಿರುವ ಅಸಾಧ್ಯ ನೋವು. ಕೆಲವೊಮ್ಮೆ ತುಂಬಾ ಜಾಸ್ತಿ ಅನ್ನಿಸಿದಾಗ ಎರಡು ಮಾತ್ರೆ ನುಂಗಿ, ಒಂದು ಗ್ಲಾಸ್ ನೀರು ಕುಡಿತೀನಿ. ಅದರೂ ಸರಿ ಹೋಗಲ್ಲ. ಬಡ್ಡಿಮಗಂದು! ಹಗಲಲ್ಲಿ ಏನೂ ಅನ್ನಿಸೋಲ್ಲ, ರಾತ್ರಿ ಹತ್ತರ ನಂತರ ಶುರುವಾಗಿ ಬಿಡುತ್ತೆ. ಕೆಲವೊಮ್ಮೆ ಸ್ವಲ್ಪ ಹೊತ್ತು, ಕೆಲವೊಮ್ಮೆ ರಾತ್ರಿ ಪೂರ್ತಿ ಇದ್ದು ನಿದ್ದೆ ಮಾಡೋಕೆ ಆಗೋಲ್ಲ.  ಆಗಾಗ ನೆನಪುಗಳು ಕನಸಲ್ಲಿ ಎಷ್ಟು ಕಾಡ್ತವೆ ಅಂದ್ರೆ, ಕೆಲವೊಮ್ಮೆ ತೀರ ಸನಿಹಕ್ಕೆ ಬಂದು ಆಲಂಗಿಸಿದಂತೆ ತೋರಿ ಬಿಡುತ್ತವೆ. ಆ ನೆನಪುಗಳನ್ನ ಮೆಲಕು ಹಾಕುವಾಗಲೆಲ್ಲ ಹೃದಯ ಬಡಿತದಲ್ಲೂ ಏರುಪೇರು! ಆ ಮಧುರ ಕ್ಷಣಗಳನ್ನ ನೆನಸಿಕೊಂಡ್ರೆ ಮನಸ್ಸಿಗೆ ಹರ್ಷವೋ, ದುಃಖವೋ, ಸಂಕಟವೋ ಅದೆನಾಗುತ್ತೆ ಅಂತ ತಿಳಿಯದು. ಎದೆನೋವು ತುಂಬಾ ಜಾಸ್ತಿ ಆದಾಗ ಮಾತ್ರೆ ತಿಂದು ಎದೆ ಗಟ್ಟಿಯಾಗಿ ಹಿಡಿದು ಕುಳಿತಾಗ ಯಾರೋ ಬಂದು "Take It Easy" ಎಂದು ತಲೆ ಸವರಿದ ಹಾಗಾಗುತ್ತೆ.

   "ಇನ್ನು ಎಷ್ಟು ದಿನ ಅಂತ ಹೀಗೆ ಇರ್ತೀಯ ಬೇಗ ಮಾಡುವೆ ಮಾಡ್ಕೋ" ಅಂತ ಯಾರಾದ್ರು ಹೇಳಿದ್ರೆ ತುಂಬಾ ಕೋಪ ಸಹಿಸಲಾರದಷ್ಟು ಸಿಟ್ಟು. ಹೌದು ಬೇರೆ ಯಾವ ತರಹದ ಸಮಸ್ಯೆಗಳು ಇಲ್ಲದಿದ್ದರೂ, ಏನೋ ಒಂಥರಾ! ಮನಸ್ಸಿಗೆ ನೆಮ್ಮದಿನೇ ಇಲ್ಲ. ಎಷ್ಟೋ ಸಲ ಸತ್ತೆಬಿಡೋಣ ಅನ್ನಿಸ್ತದೆ, ಆದ್ರೆ  ಕೆಲವೊಮ್ಮೆ ಇಷ್ಟು ಬೇಗ ಸಾಯೋಕೆ ನಂಗೆ ಅಂತದ್ದು ಏನಾಗಿದೆ ಅನ್ನಿಸ್ತದೆ. ಇನ್ನು ಕೆಲವೊಮ್ಮೆ  ನನ್ನ ಭಾವನೆಗಳನ್ನ ಅರ್ಥ ಮಾಡಿಕೊಳ್ಳೋರು  ಯಾರೂ ಇಲ್ಲವಲ್ಲ ಅಂತ ತೀರ ದುಃಖ ಕೂಡ ಆಗುತ್ತೆ. ರಾತ್ರಿ ಹೊತ್ತು ಒಬ್ಬನೇ ಕುಳಿತುಕೊಂಡು ಸಿಗರೆಟಿಂದ ಹೋಗೆ ಸುರುಳಿ ಸುರುಳಿಯಾಗಿ ಬಿಡ್ತಾ, ಅಷ್ ಟ್ರೇ ಹುಡುಕುವಾಗ ಇಷ್ಟೇನಾ ಜೀವನ ಅಂತ ಬೇಸರ ಕೂಡ ಆಗುತ್ತೆ.

  ದಿನ ರಾತ್ರಿ ಮಲಗೋಣ ಅಂತ ಕಣ್ಣು ಮುಚ್ಚಿದರೆ ಸಾಕು ಅದೇ ನೆನಪುಗಳು. ಹಗಲಲ್ಲಿ ಮರೆತಹಾಗಿರೋ ಎಲ್ಲ ನೆನಪುಗಳೂ ರಾತ್ರಿ ವೇಳೆ ಒಮ್ಮೆಲೇ ಬಂದು ದಾಳಿ ಮಾಡುತ್ವೆ. 'ಅತೀ ಮಾಡಿಕೊಳ್ಳೋದು ಬೇಡ ಆದಷ್ಟು ಮರೆಯೋಣ ಅಂದುಕೊಂಡಾಗಲೆಲ್ಲಾ, ಜಾಸ್ತಿ ಆಗುತ್ತೆ. ಕೆಲವೊಮ್ಮೆ ದೇವರ ಹತ್ರ ಬೇಡ್ಕೊತೀನಿ, 'ಆದಷ್ಟು ಬೇಗ ನನ್ನ ಈ ಖಾಯಿಲೆಯಿಂದ ಪಾರುಮಾಡು ಅಂತ. ನಂಗೆ ಈಗಲೂ ಕೂಡ ತಿಳಿಯುತ್ತಿಲ್ಲ ಈ ಥರಾ ಯಾಕೆ ಅಂತ! ಕೆಲವೊಮ್ಮೆ ಎಷ್ಟು ಹಿತ ಅನ್ನಿಸುತ್ತೆ ಅಂದ್ರೆ ಇದು ಭ್ರಮೇನೋ? ನಿಜಾನೋ? ಒಂದು ಅರ್ಥ ಆಗೋಲ್ಲ. ಅರ್ಥ ಮಾಡಿಕೊಳ್ಳೋಕೆ ಪ್ರಯತ್ನ ಪಟ್ಟಾಗಲೆಲ್ಲ ನಿರಾಶೆ. ಯಾಕಂದ್ರೆ ಏನೊಂದೂ ಅರ್ಥ ಆಗೋದಿಲ್ಲ.

  ಸುಮಾರು ಒಂದು ಐದಾರು ತಿಂಗಳಾಗಿರಬಹುದು, ಈ ಥರಾ ಭಾವನೆಗಳು ಮಾನಸಿಕವಾಗಿ ಹತ್ತಿರ ಬಂದಿರೋದು. ಆ ಭಾವನೆಗಳಿಂದಲೇ, ಮನಸ್ಸಿನಲ್ಲಿ ತಳ-ಮಳ. ಕೆಲವೊಮ್ಮೆ ಅರಿವಾಗದ, ಕಾರಣ ತಿಳಿಯದ ಅನ್ಯಮನಸ್ಕತೆ.  ಆಫೀಸಿನಲ್ಲಿ ಒಂಟಿಯಾಗಿ ಕುಳಿತಾಗ, ನಡು ರಾತ್ರಿವರೆಗೂ ಟಿ.ವಿ ನೋಡುವಾಗ ಆಗಾಗ ಅದರ ಬಗ್ಗೆಯೇ ಚಿಂತೆ.ಒಮ್ಮೊಮ್ಮೆ ಆ ನೆನಪುಗಳು ಎಷ್ಟು ಹಿತವಾಗಿರುತ್ತೆ ಅಂದ್ರೆ, ಚೇತೋಹಾರಿ ಅನ್ನಿಸುತ್ತೆ. ಕೆಲವೊಮ್ಮೆ ಅದೇ ನನ್ನ ಮಾನಸಿಕ ಬಳಲಿಕೆಯ ಕಾರಣ ಎನಿಸಿ, ಒಂದು ರೀತಿಯ ತೊಳಲಾಟ ಶುರುವಾಗಿ ಬಿಡುತ್ತೆ. ಕೆಲವೊಮ್ಮೆ ನನ್ನ ಈ ಒಂಟಿತನವೇ ಕಾರಣ ಅನ್ನಿಸಿಬಿಡುತ್ತೆ. ಆದ್ರೆ, ಯಾವುದೇ ಒಂದು ನಿರ್ದಿಷ್ಟ ಕಾರಣವೂ ತೋಚದೆ ನಾನು ನಿಸ್ಸಹಾಯಕನಂತೆ ಹೊರಳಾಡೋದಂತೂ ನಿಜ...

1 comment: